ADVERTISEMENT

ತಂಜಾವೂರಿನಲ್ಲಿ ದೇಶದ ಮೊದಲ ಆಹಾರ ಮ್ಯೂಸಿಯಂ

ವರ್ಚ್ಯುವಲ್ ಕಾರ್ಯಕ್ರಮದಲ್ಲಿ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಉದ್ಘಾಟನೆ

ಪಿಟಿಐ
Published 15 ನವೆಂಬರ್ 2021, 14:10 IST
Last Updated 15 ನವೆಂಬರ್ 2021, 14:10 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ತಂಜಾವೂರು: ತಮಿಳುನಾಡಿನ ತಂಜಾವೂರಿನಲ್ಲಿ ಸೋಮವಾರ ದೇಶದ ಮೊದಲ ಆಹಾರ ವಸ್ತು ಸಂಗ್ರಹಾಲಯವನ್ನು (ಮ್ಯೂಸಿಯಂ) ಕೇಂದ್ರ ವಾಣಿಜ್ಯ, ಕೈಗಾರಿಕೆ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪೀಯೂಷ್ ಗೋಯಲ್ ಅವರು ವರ್ಚುವಲ್‌ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದರು.

ದೆಹಲಿಯಲ್ಲಿವರ್ಚುವಲ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಪೀಯೂಷ್ ಗೋಯಲ್ ಅವರು, ಭಾರತವು ವಿಶ್ವದ ಪ್ರಸ್ತುತ ಐದನೇ ಅತಿದೊಡ್ಡ ಕೃಷಿ ರಫ್ತುದಾರ ರಾಷ್ಟ್ರವಾಗಿದೆ.ವಿಶ್ವವು ನ‌ಮ್ಮ ದೇಶವನ್ನು ವಿಶ್ವಾಸಾರ್ಹ ಪಾಲುದಾರನನ್ನಾಗಿ ನೋಡುತ್ತಿದೆ. ಜಾಗತಿಕ ಪೂರೈಕೆದಾರರಾಗಲು ರೈತರ ಉತ್ಪನ್ನಗಳನ್ನು ಜಗತ್ತಿಗೆ ಕೊಂಡೊಯ್ಯುವಲ್ಲಿ ಗುಣಮಟ್ಟ ಮತ್ತು ಉತ್ಪಾದಕತೆಯ ಮೇಲೆ ಕೇಂದ್ರೀಕರಿಸುವ ಅಗತ್ಯವಿದೆ’ ಎಂದರು.

‘ಈ ನಿಟ್ಟಿನಲ್ಲಿ ನಾವು ಆತ್ಮನಿರ್ಭರ ಭಾರತ ಮಿಷನ್‌ ಅಡಿ ಕೆಲಸವನ್ನು ಮುಂದುವರಿಸುತ್ತೇವೆ. ದೇಶದ ಆಹಾರ ಭದ್ರತೆಯ ಕಥೆಯನ್ನು ಚಿತ್ರಿಸುವಲ್ಲಿ ತಂಜಾವೂರಿನ ಆಹಾರ ವಸ್ತುಸಂಗ್ರಹಾಲಯವು ಮೊದಲನೆಯದು. ತಂಜಾವೂರು ತಮಿಳುನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿತ್ತು. ಆದರೆ, ಈಗ ತಮಿಳುನಾಡು ಭಾರತದ ಕೃಷಿ ಇತಿಹಾಸದ ತವರು ಆಗಲಿದೆ’ ಎಂದು ಹೇಳಿದರು.

ADVERTISEMENT

ಇದೇ ವೇಳೆ ಭಾರತ ಆಹಾರ ನಿಗಮವು (ಎಫ್‌ಸಿಐ) ಹುಬ್ಬಳ್ಳಿಯಲ್ಲಿ ಆರಂಭಿಸಿರುವ ನೂತನ ವಿಭಾಗೀಯ ಕಚೇರಿ ಕುರಿತು ಪೀಯೂಷ್ ಗೋಯಲ್ ಅವರು ಅಭಿನಂದನೆ ಸಲ್ಲಿಸಿದರು.

‘ಆಹಾರ ಭದ್ರತೆಗಾಗಿ ಚೇತರಿಸಿಕೊಳ್ಳುವ ಮೂಲಸೌಕರ್ಯಗಳ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಯನ್ನು ಸಾಕಾರಗೊಳಿಸುವತ್ತ ಇದು ಒಂದು ಹೆಜ್ಜೆಯಾಗಿದೆ’ ಎಂದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಲವು ಸಾಧನೆಗಳನ್ನು ಸ್ಮರಿಸಿದ ಅವರು, ‘ಕೇಂದ್ರವು ದೌರ್ಜನ್ಯತಡೆ ಕಾಯ್ದೆಯನ್ನು ಬಲಪಡಿಸಿದೆ. ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸುತ್ತಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.