ADVERTISEMENT

ರಣವೀರ್‌ ಅಲಹಾಬಾದಿಯಾಗೆ ಪಾಸ್‌ಪೋರ್ಟ್ ಹಿಂತಿರುಗಿಸಲು ಸುಪ್ರೀಂ ಕೋರ್ಟ್‌ ಆದೇಶ

ಪಿಟಿಐ
Published 28 ಏಪ್ರಿಲ್ 2025, 14:20 IST
Last Updated 28 ಏಪ್ರಿಲ್ 2025, 14:20 IST
<div class="paragraphs"><p>ರಣವೀರ್‌ ಅಲಹಾಬಾದಿಯಾ</p></div>

ರಣವೀರ್‌ ಅಲಹಾಬಾದಿಯಾ

   

ನವದೆಹಲಿ: ಕೆಲಸದ ನಿಮಿತ್ತ ವಿದೇಶಕ್ಕೆ ಪ್ರಯಾಣಿಸಲು ಪಾಡ್‌ಕಾಸ್ಟರ್‌ ರಣವೀರ್‌ ಅಲಹಾಬಾದಿಯಾ ಅವರಿಗೆ ಪಾಸ್‌ಪೋರ್ಟ್‌ ಹಿಂದಿರುಗಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಆದೇಶಿಸಿದೆ.

ರಣವೀರ್‌ ವಿರುದ್ಧದ ತನಿಖೆ ಪೂರ್ಣಗೊಂಡಿದೆ ಎಂದು ಅಸ್ಸಾಂ ಮತ್ತು ಮಹಾರಾಷ್ಟ್ರ ಸರ್ಕಾರಗಳು ಹೇಳಿದ ಕಾರಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು ಷರತ್ತುಗಳನ್ನು ಸಡಿಲಿಸಲು ನಿರ್ಧರಿಸಿತು.

ADVERTISEMENT

ಪಾಸ್‌ಪೋರ್ಟ್ ವಾಪಸ್‌ ಪಡೆಯಲು ಮಹಾರಾಷ್ಟ್ರ ಸೈಬರ್ ಪೊಲೀಸ್ ಬ್ಯೂರೊವನ್ನು ಸಂಪರ್ಕಿಸುವಂತೆಯೂ ಪೀಠವು ಅವರಿಗೆ ಸೂಚಿಸಿದೆ.

ತನ್ನ ವಿರುದ್ಧ ವಿವಿಧೆಡೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಗ್ಗೂಡಿಸಿ, ಒಂದೇ ಕಡೆ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕೆಂದು ಕೋರಿ ರಣವೀರ್‌ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವುದಾಗಿ ಪೀಠವು, ಅವರ ಪರ ಹಾಜರಾದ ಹಿರಿಯ ವಕೀಲ ಅಭಿನವ್‌ ಚಂದ್ರಚೂಡ್‌ ಅವರಿಗೆ ತಿಳಿಸಿತು.

‘ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಆಡಿದ ಅಶ್ಲೀಲ ಮಾತುಗಳ ಸಂಬಂಧ ರಣವೀರ್‌ ವಿರುದ್ಧ ಹಲವೆಡೆ ಎಫ್‌ಐಆರ್‌ ದಾಖಲಾಗಿದೆ. ತಮ್ಮ ವಿರುದ್ಧ ಕಠಿಣ ಕ್ರಮ ಜರುಗಿಸದಂತೆ ರಕ್ಷಣೆ ನೀಡಬೇಕು ಎಂದು ಕೋರಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ರಣವೀರ್‌ ಅವರನ್ನು ಬಂಧಿಸಬಾರದು ಎಂದು ಫೆ.18ರ ತನ್ನ ಆದೇಶದಲ್ಲಿ ಹೇಳಿದ್ದ ಸುಪ್ರೀಂ ಕೋರ್ಟ್‌, ಪಾಸ್‌ಪೋರ್ಟ್‌ ಅನ್ನು ಪ್ರಕರಣದ ವಿಚಾರಣೆ ನಡೆಸುತ್ತಿರುವ ಸೈಬರ್‌ ಅಪರಾಧ ಪೊಲೀಸ್‌ ಠಾಣೆಗೆ ಒಪ್ಪಿಸುವಂತೆ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.