ADVERTISEMENT

ಭಾರತದ ಜಿ- 20 ಅಧ್ಯಕ್ಷ ಸ್ಥಾನ ಎಲ್ಲಾ ನಾಗರಿಕರಿಗೆ ಹೆಮ್ಮೆಯ ವಿಷಯ: ಮೋದಿ

ಪಿಟಿಐ
Published 5 ಡಿಸೆಂಬರ್ 2022, 16:22 IST
Last Updated 5 ಡಿಸೆಂಬರ್ 2022, 16:22 IST
ನವದೆಹಲಿಯಲ್ಲಿ ಸೋಮವಾರ ಬಿಜೆಪಿ ರಾಷ್ಟ್ರಘಟಕದ ಪದಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಹೂವು ನೀಡುವ ಮೂಲಕ ಸ್ವಾಗತಿಸಿದರು –ಪಿಟಿಐ ಚಿತ್ರ 
ನವದೆಹಲಿಯಲ್ಲಿ ಸೋಮವಾರ ಬಿಜೆಪಿ ರಾಷ್ಟ್ರಘಟಕದ ಪದಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಹೂವು ನೀಡುವ ಮೂಲಕ ಸ್ವಾಗತಿಸಿದರು –ಪಿಟಿಐ ಚಿತ್ರ    

ನವದೆಹಲಿ: ‘ಭಾರತವು ಜಿ– 20 ರಾಷ್ಟ್ರಗಳ ಅಧ್ಯಕ್ಷ ಸ್ಥಾನ ವಹಿಸಿರುವುದು ದೇಶದ ಎಲ್ಲ ನಾಗರಿಕರಿಗೆ ಹೆಮ್ಮೆಯ ವಿಷಯ. ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಸ್ಕೃತಿಯನ್ನು ನೆಲೆಗೊಳಿಸುವ ಅವಕಾಶ ದೊರೆತಂತಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ಗಡಿ ಗ್ರಾಮಗಳ ಗ್ರಾಮಸ್ಥರೊಂದಿಗೆ ನೇರ ಸಂಪರ್ಕ ಹೊಂದಿರಬೇಕು. ಪ್ರವಾಸಿಗರನ್ನು ಸೆಳೆಯುವಂತಹ ಸ್ಥಳಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ರಷ್ಯಾ– ಉಕ್ರೇನ್ ನಡುವಿನ ಯುದ್ಧ ಮತ್ತು ಕೋವಿಡ್ ಸಾಂಕ್ರಾಮಿಕದಂತಹ ಜಾಗತಿಕ ಸವಾಲುಗಳ ನಡುವೆಯೂ ದೇಶವು ಆರ್ಥಿಕವಾಗಿ ಸದೃಢತೆ ಸಾಧಿಸಿದೆ. ವಿಶ್ವಮನ್ನಣೆ ಗಳಿಸಿದೆ ಎಂದರು.

ADVERTISEMENT

ಎರಡು ವಿಭಿನ್ನ ಸ್ಥಳಗಳ ಪ್ರಾಚೀನ ಸಾಂಸ್ಕೃತಿಕ ಸಂಬಂಧಗಳನ್ನು ಆಚರಿಸಲು ವಾರಾಣಸಿಯಲ್ಲಿ ನಡೆಯುತ್ತಿರುವ ಒಂದು ತಿಂಗಳ ಅವಧಿಯ ‘ಕಾಶಿ ತಮಿಳು ಸಂಗಮಂ’ ಕಾರ್ಯಕ್ರಮವನ್ನು ಮೋದಿ ಶ್ಲಾಘಿಸಿದರು.

ಆಂತರಿಕವಾಗಿ ನಡೆದ ಸಭೆಯಲ್ಲಿ ಮೋದಿ ಅವರು ಮಾಡಿರುವ ಭಾಷಣದ ವಿವರಗಳನ್ನು ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳಲ್ಲದೆ, ಬಿಜೆಪಿಯ ರಾಜ್ಯ ಘಟಕಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು (ಸಂಘಟನೆ) ಕೂಡ ಭಾಗವಹಿಸಿದ್ದರು. ಎರಡು ದಿನಗಳ ಸಭೆಯಲ್ಲಿ ವಿವಿಧ ವಿಷಯಗಳು ಮತ್ತು ಮುಂಬರುವ ರಾಜ್ಯ ಚುನಾವಣೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ರಮಣ್‌ ಸಿಂಗ್ ಹೇಳಿದ್ದಾರೆ.

ತ್ರಿಪುರಾ ಮತ್ತು ಛತ್ತೀಸಗಢದ ಜೊತೆಗೆ ಕರ್ನಾಟಕ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿ ಕೆಲ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ವಿಧಾನಸಭಾ ಚುನಾವಣೆಗಳನ್ನು ನಡೆಸುವ ಕುರಿತು ನಿರ್ಧರಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ಪ್ರಧಾನಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ

ಮುಂದಿನ ವರ್ಷ ನಡೆಯಲಿರುವ ಜಿ– 20 ಶೃಂಗಸಭೆಯ ಕಾರ್ಯತಂತ್ರ ರೂಪಿಸಲು, ಸಂಪೂರ್ಣ ಸಹಕಾರ ಮತ್ತು ಸಲಹೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು.

ಈ ಸಭೆಯಲ್ಲಿ ಪಾಲ್ಗೊಂಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು‘ಜಿ -20 ಅಧ್ಯಕ್ಷ ಸ್ಥಾನವು ಒಂದು ಪಕ್ಷದ ಕಾರ್ಯಸೂಚಿಯ ಬಗೆಗಿನ ಸಭೆಗೆ ಅಲ್ಲ, ಇಡೀ ದೇಶಕ್ಕಾಗಿ ಲಭಿಸಿರುವುದು’ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಅಭಿವೃದ್ಧಿಯನ್ನು ತಮ್ಮ ಸರ್ಕಾರದ ಬಹುದೊಡ್ಡ ಸಾಧನೆಯಾಗಿ ಜಿ–20 ಸಭೆಯಲ್ಲಿ ಬಿಂಬಿಸಿಕೊಳ್ಳಲು ಮುಂದಾಗಿರುವ ಬಿಜೆಪಿಯ ಪ್ರಯತ್ನ ತಡೆಯುವ ಸಲುವಾಗಿ ವಿರೋಧ ಪಕ್ಷಗಳ ನಾಯಕರಿಂದ ಇಂತಹ ಹೇಳಿಕೆಗಳು ಬಂದಿವೆ ಎನ್ನಲಾಗಿದೆ.

ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್, ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹಾಗೂ ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಎಸ್. ಜೈಶಂಕರ್, ರಾಜನಾಥ ಸಿಂಗ್ ಮತ್ತು ಪಿಯೂಷ್ ಗೋಯಲ್ ಉಪಸ್ಥಿತರಿದ್ದರು.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್‌, ಜೆಡಿಯು ಮುಖ್ಯಸ್ಥ ಲಲನ್‌ ಸಿಂಗ್‌ ಹಾಗೂ ಆರ್‌ಜೆಡಿ ಮುಖ್ಯಸ್ಥರು ಸಭೆಗೆ ಗೈರು ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.