ADVERTISEMENT

ವಿಕಸಿತ ಭಾರತ‌ ನಿರ್ಮಾಣದ ಸಾಕಾರಕ್ಕೆ ಭಾರತದ ಯುವಕರಲ್ಲಿದೆ ಸಾಮರ್ಥ್ಯ: ಮೋದಿ

‘ವಿಕಸಿತ ಭಾರತದ ಯುವ ನೇತಾರರ ಜೊತೆ ಸಂವಾದ’ದಲ್ಲಿ ಪ್ರಧಾನಿ ಮೋದಿ ಭರವಸೆ

ಪಿಟಿಐ
Published 12 ಜನವರಿ 2025, 16:09 IST
Last Updated 12 ಜನವರಿ 2025, 16:09 IST
ನವದೆಹಲಿಯಲ್ಲಿ ನಡೆದ ಯುವಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾನುವಾರ ಪಾಲ್ಗೊಂಡರು. ಕೇಂದ್ರದ ವಿವಿಧ ಸಚಿವರು ಇದ್ದರು –ಪಿಟಿಐ ಚಿತ್ರ
ನವದೆಹಲಿಯಲ್ಲಿ ನಡೆದ ಯುವಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾನುವಾರ ಪಾಲ್ಗೊಂಡರು. ಕೇಂದ್ರದ ವಿವಿಧ ಸಚಿವರು ಇದ್ದರು –ಪಿಟಿಐ ಚಿತ್ರ   

ನವದೆಹಲಿ: ‘ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಬೇಕು ಎಂಬ ಗುರಿಯನ್ನು ತಲುಪುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯವಿದೆ. ಆದರೆ, ಇದು ಅಸಾಧ್ಯವಾದ ಮಾತೇನಲ್ಲ. ಈ ಗುರಿಯನ್ನು ಮುಟ್ಟುವ ಸಾಮರ್ಥ್ಯ ನಮ್ಮ ದೇಶದ ಯುವಕರಲ್ಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ಸ್ವಾಮಿ ವಿವೇಕಾನಂದ ಅವರ ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಲಾಗಿದ್ದ ‘ವಿಕಸಿತ ಭಾರತದ ಯುವ ನೇತಾರರ ಜೊತೆ ಸಂವಾದ’ ಕಾರ್ಯಕ್ರಮದಲ್ಲಿ ಅವರು 3 ಸಾವಿರ ಯುವಕರೊಂದಿಗೆ ಸಂವಾದ ನಡೆಸಿದರು. ಈ ದಿನವನ್ನು ‘ರಾಷ್ಟ್ರೀಯ ಯುವಕರ ಹಬ್ಬ’ವನ್ನಾಗಿ ಆಚರಿಸಲಾಗುತ್ತಿದೆ. ಜೊತೆಗೆ, ಪ್ರತೀ ವರ್ಷ ಈ ದಿನವನ್ನು ‘ರಾಷ್ಟ್ರೀಯ ಯುವ ದಿನ’ವನ್ನಾಗಿ ಆಚರಿಸಲಾಗುತ್ತದೆ.

‘2047ರವರೆಗಿನ ಈ 22 ವರ್ಷವು ಭಾರತದ ಮಟ್ಟಿಗೆ ಸುವರ್ಣ ಯುಗವಾಗಿರಲಿದೆ. ದೇಶವನ್ನು ಸರ್ಕಾರ ಮಾತ್ರವೇ ಮುನ್ನಡೆಸಲು ಸಾಧ್ಯವಿಲ್ಲ. ‘ವಿಕಸಿತ ಭಾರತ’ಕ್ಕೆ ಮೋದಿ ಮಾತ್ರವೇ ನಾಯಕನಲ್ಲ. ಬದಲಿಗೆ ನೀವು, ಎಲ್ಲ ಯುವಕರು ನಾಯಕರೇ ಆಗಿದ್ದೀರಿ. ದೇಶದ ನೀತಿಗಳಲ್ಲಿ ನಿಮ್ಮ ಆಲೋಚನೆಗಳೂ ಇರಲಿವೆ’ ಎಂದರು.

ADVERTISEMENT

‘ದೇಶವು ಮುಂದೆ ಸಾಗಲು ದೊಡ್ಡ ಮಟ್ಟದ ಗುರಿ‌ಗಳನ್ನು ಹಾಕಿಕೊಳ್ಳಬೇಕು. ಭಾರತವು ಈಗ ಇದನ್ನೇ ಮಾಡುತ್ತಿದೆ. ನೀವು ನಮ್ಮ ವಿಕಸಿತ ಭಾರತದ ಕನಸನ್ನು ನನಸು ಮಾಡಲಿದ್ದೀರಿ ಎನ್ನುವ ಭರವಸೆ ನನಗಿದೆ. ನೀವು ರೂಪಿಸುವ ವಿಕಸಿತ ಭಾರತವು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಅಭಿವೃದ್ಧಿ ಹೊಂದಲಿದೆ’ ಎಂದರು.

ಸಂವಾದ ಕಾರ್ಯಕ್ರಮ ಜೊತೆಗೇ ಆಯೋಜಿಸಲಾಗಿದ್ದ ವಸ್ತುಪ್ರದರ್ಶನಕ್ಕೂ ಪ್ರಧಾನಿ ಮೋದಿ ಅವರು ಭೇಟಿ ನೀಡಿದರು. ಹಲವು ಯುವ ನೇತಾರರು ತಮ್ಮ ಯೋಜನೆಗಳನ್ನು, ಸಂಶೋಧನೆಗಳನ್ನು, ತಾವು ರೂಪಿಸಿದ ಯಂತ್ರಗಳನ್ನು ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಿದರು. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿವರಣೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.