ADVERTISEMENT

ಕೋವಿಡ್ ವಿರುದ್ಧ ಹೋರಾಡಲು ವೈಯಕ್ತಿಕ ಜಾಗರೂಕತೆ, ಶಿಸ್ತು ಅಗತ್ಯ: ಪ್ರಧಾನಿ ಮೋದಿ

ಪಿಟಿಐ
Published 26 ಡಿಸೆಂಬರ್ 2021, 7:55 IST
Last Updated 26 ಡಿಸೆಂಬರ್ 2021, 7:55 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಆತಂಕದ ಮಧ್ಯೆ, ಕೊರೊನಾ ವೈರಸ್‌ನ ಹೊಸ ರೂಪಾಂತರದ ವಿರುದ್ಧದ ಹೋರಾಟದಲ್ಲಿ ವೈಯಕ್ತಿಕ ಜಾಗರೂಕತೆ ಮತ್ತು ಶಿಸ್ತು ದೇಶದ ದೊಡ್ಡ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಿಳಿಸಿದ್ದಾರೆ.

ತಮ್ಮ ಮಾಸಿಕ ‘ಮನ್‌ ಕಿ ಬಾತ್‌’ ರೆಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಕೋವಿಡ್ ಲಸಿಕಾ ಅಭಿಯಾನದಲ್ಲಿ ಅಭೂತಪೂರ್ವ ಸಾಧನೆಯನ್ನು ಸಾಧಿಸಿದ್ದರೂ ಕೂಡ ವೈರಸ್‌ನ ಹೊಸ ರೂಪಾಂತರದ ಬಗ್ಗೆ ಎಚ್ಚರಿಕೆಯಿಂದಿರಬೇಕು. ಓಮೈಕ್ರಾನ್ ಅನ್ನು ನಮ್ಮ ವಿಜ್ಞಾನಿಗಳು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಪ್ರತಿ ದಿನವೂ ಅವರಿಗೆ ಹೊಸ ಮಾಹಿತಿ ಲಭ್ಯವಾಗುತ್ತಿದೆ ಮತ್ತು ಅವರ ಸಲಹೆ ಆಧಾರದ ಮೇಲೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ' ಎಂದರು.

ಓಮೈಕ್ರಾನ್ ವಿರುದ್ಧ ಹೋರಾಡಲು ವೈಯಕ್ತಿಕವಾಗಿ ಎಚ್ಚರಿಕೆಯಿಂದಿರುವುದು ಮತ್ತು ಶಿಸ್ತುಬದ್ಧವಾಗಿರುವುದು ದೇಶದ ಅತಿದೊಡ್ಡ ಶಕ್ತಿಯಾಗಿದೆ. ಕೊರೊನಾವನ್ನು ಸೋಲಿಸಲು ನಾವು ಒಗ್ಗಟ್ಟಿನಿಂದ ಹೋರಾಡಬೇಕಿದೆ. ಈ ಜವಾಬ್ದಾರಿಯುತ ಪ್ರಜ್ಞೆಯೊಂದಿಗೆ ನಾವು 2022 ಕ್ಕೆ ಪ್ರವೇಶಿಸಬೇಕಾಗಿದೆ' ಎಂದು ಹೇಳಿದರು.

ADVERTISEMENT

ತಮಿಳುನಾಡಿನ ಕೂನೂರಿನ ಬಳಿ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವಿಗೀಡಾದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್, ಬರೆದಿದ್ದ ಪತ್ರದ ಕುರಿತು ಮನ್ ಕಿ ಬಾತ್‌ನಲ್ಲಿ ಮೋದಿ ಪ್ರಸ್ತಾಪಿಸಿದರು.

'ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ತಮ್ಮ ಕೊನೆ ಉಸಿರಿರುವವರೆಗೂ ಹೋರಾಡಿದರು. 2021ರ ಆಗಸ್ಟ್‌ನಲ್ಲಿ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಾಧನೆಯ ಉತ್ತುಂಗಕ್ಕೇರಿದ್ದರೂ ಅವರು ತಮ್ಮ ಶಾಲೆಯ ಪ್ರಾಂಶುಪಾಲರಿಗೆ ಪತ್ರ ಬರೆಯುವ ಮೂಲಕ ತನ್ನ ಮೂಲ ಮತ್ತು ಕಲಿಕೆಯನ್ನು ಮರೆಯಲಿಲ್ಲ. ಸಂಭ್ರಮಿಸುವ ಹೊತ್ತಿನಲ್ಲಿಮುಂದಿನ ಪೀಳಿಗೆ ಬಗ್ಗೆ ಕಾಳಜಿ ತೋರಿಸಿದರು' ಎಂದು ಹೇಳಿದರು.

ಶನಿವಾರವಷ್ಟೇ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ದೇಶದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಜನವರಿ 3ರಿಂದ ಕೋವಿಡ್ ತಡೆ ಲಸಿಕೆ ನೀಡಲಾಗುವುದು. ದೇಶದ ಮುಂಚೂಣಿ ಕಾರ್ಯಕರ್ತರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಅವರು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.