ADVERTISEMENT

ಸಿಂಧೂ ನದಿಗಳಿಂದ ಇತರೆ ರಾಜ್ಯಗಳಿಗೆ ನೀರು: ಕೇಂದ್ರ ಸಚಿವ ಸಿ.ಆರ್‌.ಪಾಟೀಲ್‌

ಪಿಟಿಐ
Published 15 ಸೆಪ್ಟೆಂಬರ್ 2025, 17:12 IST
Last Updated 15 ಸೆಪ್ಟೆಂಬರ್ 2025, 17:12 IST
ಸಿ.ಆರ್‌.ಪಾಟೀಲ್, ಜಲಶಕ್ತಿ ಸಚಿವ
ಸಿ.ಆರ್‌.ಪಾಟೀಲ್, ಜಲಶಕ್ತಿ ಸಚಿವ   

ನವದೆಹಲಿ: ಅಮಾನತಿನಲ್ಲಿ ಇಟ್ಟಿರುವ ಸಿಂಧೂ ಜಲ ಒಪ್ಪಂದದ ವ್ಯಾಪ್ತಿಗೆ ಬರುವ ನದಿಗಳ ನೀರನ್ನು ನೀರಿನ ಅಭಾವ ಎದುರಿಸುತ್ತಿರುವ ದೇಶದ ಇತರೆ ರಾಜ್ಯಗಳಿಗೆ ತಿರುಗಿಸುವ ಎಲ್ಲ ಪ್ರಯತ್ನಗಳನ್ನು ಸರ್ಕಾರ ನಡೆಸುತ್ತಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ್‌ ಅವರು ಸೋಮವಾರ ತಿಳಿಸಿದರು.

‘ಸಿಂಧೂ ಜಲ ಒಪ್ಪಂದ ವಿಚಾರ ಅಂತರರಾಷ್ಟ್ರೀಯ ಪರಿಣಾಮಗಳನ್ನು ಹೊಂದಿದೆ. ಹೀಗಾಗಿ ಈ ಬಗ್ಗೆ ವಿಸ್ತಾರವಾಗಿ ಪ್ರಸ್ತಾಪಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ನಿರ್ಧಾರವನ್ನು ಗೃಹ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ ಜೊತೆಗೂಡಿ ಅನುಷ್ಠಾನಕ್ಕೆ ತರುತ್ತೇವೆ. ಇದು ದೇಶಕ್ಕೆ ದೊಡ್ಡಮಟ್ಟದ ಅನುಕೂಲ ಆಗಲಿದೆ’ ಎಂದರು.

ಆಧಾರ್ ಮೂಲಸೌಕರ್ಯ ಸಂಗಮ–2025 ಕಾರ್ಯಕ್ರಮದಲ್ಲಿ ನದಿ ಪುನಶ್ಚೇತನ ಕುರಿತು ಮಾತನಾಡಿದ ಅವರು, ‘ಸಿಂಧೂ ನದಿ ನೀರು ತಿರುಗಿಸುವುದರಿಂದ ನೀರಿನ ಅಭಾವ ಹೊಂದಿರುವ ರಾಜ್ಯಗಳಿಗೆ ಅನುಕೂಲ ಆಗಲಿದೆ. ರೈತರ ಬೆಳೆಗೆ ನೀರು ಸಿಗಲಿದ್ದು, ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ’ ಎಂದು ಹೇಳಿದರು.

ADVERTISEMENT

ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ನಂತರ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತಿನಲ್ಲಿ ಇಟ್ಟಿತ್ತು.

ನಮಾಮಿ ಗಂಗೆ ಯಶಸ್ವಿ

ನಮಾಮಿ ಗಂಗೆ ಯೋಜನೆ ಯಶಸ್ಸು ಕಾಣುತ್ತಿದೆ ಎಂದ ಸಚಿವರು, ಕುಂಭಮೇಳದಲ್ಲಿ ಸುಮಾರು 60–70 ಲಕ್ಷ ಭಕ್ತರು ಪುಣ್ಯಸ್ನಾನದಲ್ಲಿ ಭಾಗವಹಿಸಿದ್ದರು. ಹರಿದ್ವಾರದಿಂದ ಬಂಗಾಳದವರೆಗೆ 211 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿವೆ. ತ್ಯಾಜ್ಯ ನೀರು ಸಂಸ್ಕರಣೆಯಿಂದಾಗಿ ನದಿ ನೀರು ಸ್ವಚ್ಛವಾಗಿ ಉಳಿಯಿತು ಎಂದರು.

ಯಮುನಾ ಸ್ವಚ್ಛತೆಗೆ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ದೋಣಿಗಳನ್ನು ಬಳಲಾಗುತ್ತಿದೆ. ಇವು ನೀರಿನಲ್ಲಿ ಬೆಳೆದ ಕಳೆಗಳನ್ನು 45 ದಿನಗಳಲ್ಲೇ ಹೊರತೆಗೆಯುತ್ತವೆ. ರಾಜ್ಯ ಸರ್ಕಾರಗಳೂ ಇದಕ್ಕೆ ಸಹಕಾರ ನೀಡುತ್ತಿವೆ ಎಂದು ಹೇಳಿದರು.

ಅಣೆಕಟ್ಟೆ ನಿರ್ಮಾಣ ದೊಡ್ಡ ಸವಾಲು

ಅಣೆಕಟ್ಟೆಗಳ ನಿರ್ಮಾಣ ಎಲ್ಲಾ ಕಾಲಕ್ಕೂ ಕಾರ್ಯಸಾಧುವಲ್ಲ. ಈಗಾಗಲೇ ಹಲವು ನದಿಗಳಿಗೆ ಅಣೆಕಟ್ಟೆ ನಿರ್ಮಿಸಲಾಗುತ್ತಿದೆ. ಭೂಸ್ವಾಧೀನ ಪರಿಸರ ಅನುಮತಿ ಜೊತೆಗೆ ಒಂದು ಅಣೆಕಟ್ಟೆ ನಿರ್ಮಿಸಲು ಕನಿಷ್ಠ 25 ವರ್ಷ ₹25000 ಕೋಟಿಗೂ ಹೆಚ್ಚು ಹಣಬೇಕು. ಇದಕ್ಕಾಗಿ ನಾವು 25 ವರ್ಷ ಕಾಯಬೇಕೆ? ಎಂದು ಪ್ರಶ್ನಿಸಿದರು. ಇದೇ ಕಾರಣಕ್ಕೆ ಸಾರ್ವಜನಿಕ ಸಹಭಾಗಿತ್ವದಲ್ಲಿ ನೀರು ಸಂಸ್ಕರಣಾಗಾರಗಳನ್ನು ನಿರ್ಮಿಸಲಾಗಿದೆ. ಕಳೆದ ಎಂಟು ತಿಂಗಳುಗಳಲ್ಲಿ ದೇಶದ 611 ಜಿಲ್ಲೆಗಳಲ್ಲಿ 32 ಲಕ್ಷಕ್ಕೂ ಹೆಚ್ಚು ಸಂಸ್ಕರಣಾಗಾರ ನಿರ್ಮಾಣವಾಗಿವೆ. ಇಲಾಖೆ ಇದಕ್ಕಾಗಿ ಒಂದು ರೂಪಾಯಿಯನ್ನೂ ನೀಡಿಲ್ಲ. ಇದರಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.