ಸಿಂಧೂ ನದಿ
ನವದೆಹಲಿ: ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸುವವರೆಗೂ ಸಿಂಧೂ ಜಲ ಒಪ್ಪಂದ ಅಮಾನತಿನಲ್ಲಿರಲಿದೆ ಎಂದು ಭಾರತ ಗುರುವಾರ ಹೇಳಿದೆ.
ಒಪ್ಪಂದ ಅಮಾನತು ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಾಕಿಸ್ತಾನ ಮನವಿ ಮಾಡಿದ ಬೆನ್ನಲ್ಲೇ ಭಾರತದ ಹೇಳಿಕೆ ಹೊರಬಿದ್ದಿದೆ.
‘ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಲಾಗಿದೆ ಮತ್ತು ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾ
ದನೆಯನ್ನು ನಿಲ್ಲಿಸುವವರೆಗೂ ಈ ನಿರ್ಧಾರ ಜಾರಿಯಲ್ಲಿರಲಿದೆ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.
ಒಪ್ಪಂದ ಅಮಾನತು ನಿರ್ಧಾರವನ್ನು ಮರುಪರಿಶೀಲಿಸಲು ಕೋರಿ ಪಾಕಿಸ್ತಾನದ ಜಲಸಂಪನ್ಮೂಲ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ ಪತ್ರ ಬರೆದಿದ್ದಾರೆ ಎಂದು ಮೂಲಗಳು ಹೇಳಿವೆ.
ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬಶ್ರೀ ಮುಖರ್ಜಿ ಅವರಿಗೆ ಬರೆದ ಪತ್ರದಲ್ಲಿ, ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತದ ಜತೆ ಚರ್ಚಿಸಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ. ಅದೇ ರೀತಿ, ಯಾವ ಆಧಾರದಲ್ಲಿ ಒಪ್ಪಂದವನ್ನು ಅಮಾನತಿನಲ್ಲಿರಿಸಲಾಗಿದೆ ಎಂದೂ ಪ್ರಶ್ನಿಸಿದ್ದಾರೆ.
ಭಾರತದ ನಿರ್ಧಾರ ‘ಏಕಪಕ್ಷೀಯ ಮತ್ತು ಕಾನೂನುಬಾಹಿರ’ ಹಾಗೂ ‘ಪಾಕಿಸ್ತಾನದ ಜನರು ಮತ್ತು ಅದರ
ಆರ್ಥಿಕತೆಯ ಮೇಲಿನ ದಾಳಿಗೆ ಸಮನಾದುದು’ ಎಂದಿದ್ದಾರೆ. ಪಾಕಿಸ್ತಾನದ ಜತೆ ಮಾತುಕತೆಗೆ ಪ್ರತಿನಿಧಿಗಳನ್ನು ಹೆಸರಿಸುವಂತೆಯೂ ಪತ್ರದಲ್ಲಿ ಕೋರಿದ್ದಾರೆ.
ಭಾರತದ ನಿರ್ಧಾರವು ಪಾಕಿಸ್ತಾನದ ಜನರ ಜೀವನದ ಮೇಲೆ ಪರಿಣಾಮ ಬೀರಲಿರುವುದರಿಂದ ಅಮಾನತು ನಿರ್ಧಾರ ಮರುಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
‘ಭಾರತದ ನಿಲುವು ದೃಢ’
‘ಸಿಂಧೂ ಜಲ ಒಪ್ಪಂದ ಅಮಾನತಿನಲ್ಲಿರಿಸುವ ತನ್ನ ನಿಲುವಿನಲ್ಲಿ ಭಾರತ ದೃಢವಾಗಿದೆ’ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಮನವಿಯ ಬಗ್ಗೆ ಜಲಶಕ್ತಿ ಸಚಿವಾಲಯದ ಅಧಿಕಾರಿಗಳು ಅಧಿಕೃತವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದ ನಿಲುವು ಬದಲಾಗುವ ಸಾಧ್ಯತೆಯಿಲ್ಲ ಎಂದು ಸರ್ಕಾರದ ಮೂಲಗಳು ಸೂಚಿಸಿವೆ. ಪಾಕಿಸ್ತಾನದ ಮನವಿಯ ಬಗ್ಗೆ ಸರ್ಕಾರದ ಉನ್ನತ ಮಟ್ಟದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಸಚಿವಾಲಯದ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.