ADVERTISEMENT

ಕಾಶ್ಮೀರದಲ್ಲಿ ಬಂಡವಾಳ ಹೂಡಿಕೆಗೆ ಹುಮ್ಮಸ್ಸು

50ಕ್ಕೂ ಹೆಚ್ಚು ಪ್ರಸ್ತಾವ; ಭೂ ಬ್ಯಾಂಕ್ ಸ್ಥಾಪನೆಗೆ ಸರ್ಕಾರ ಚಿಂತನೆ

ಜುಲ್ಫಿಕರ್ ಮಜಿದ್
Published 29 ಸೆಪ್ಟೆಂಬರ್ 2019, 20:00 IST
Last Updated 29 ಸೆಪ್ಟೆಂಬರ್ 2019, 20:00 IST
ಅಮಿತ್ ಶಾ
ಅಮಿತ್ ಶಾ   

ಶ್ರೀನಗರ: ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಪಡಿಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಕೈಗಾರಿಕೆಗಳನ್ನು ತೆರೆಯಲು ಅನ್ಯರಾಜ್ಯದ ಉದ್ಯಮಿಗಳು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಉದ್ದಿಮೆ ಸ್ಥಾಪನೆಗೆ ಬೇಕಿರುವ ಜಮೀನು ಒದಗಿಸಲು ಭೂ ಬ್ಯಾಂಕ್ ಸ್ಥಾಪನೆಗೆ ಸರ್ಕಾರ ಚಿಂತಿಸುತ್ತಿದೆ.

ಕೈಗಾರಿಕೆ ಸ್ಥಾಪಿಸಲು ಉತ್ಸುಕತೆ ತೋರಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರದವರ ಪ್ರಮಾಣ ಹೆಚ್ಚು. ಆಹಾರ ಸಂಸ್ಕರಣೆ, ಕೃಷಿ ಉದ್ಯಮ ಹಾಗೂ ತಯಾರಿಕಾ ಘಟಕಗಳಿಗೆ 10 ವರ್ಷ ತೆರಿಗೆ ವಿನಾಯಿತಿ ಹಾಗೂ ಪ್ರೋತ್ಸಾಹಕ ಕೊಡುಗೆ ನೀಡುವಂತೆ ಪುಣೆ, ಮುಂಬೈನ ಹಲವು ಕಂಪನಿಗಳು ಪ್ರಸ್ತಾಪ ಇಟ್ಟಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಗಸ್ಟ್ 5ರ ಬಳಿಕ 50ಕ್ಕೂ ಹೆಚ್ಚು ಪತ್ರಗಳು ರಾಜ್ಯ ಸರ್ಕಾರದ ಕೈಸೇರಿವೆ. ‘ಸರ್ಕಾರ ಕೈಗಾರಿಕೆ ಸ್ಥಾಪನೆಗೆ ಹಸಿರುನಿಶಾನೆ ತೋರಿದರೆ, ದೊಡ್ಡ ಪ್ರಮಾಣದ ಜಮೀನಿನ ಅಗತ್ಯ ಬೀಳಲಿದೆ. ಯಾವ ಪ್ರದೇಶದಲ್ಲಿ ಜಮೀನು ಲಭ್ಯವಾಗಬಹುದು ಎಂದು ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಬರುವ ವರ್ಷಕ್ಕೆ ಮುಂದೂಡಿಕೆಯಾಗಿದ್ದರೂ, ಅಧಿಕಾರಿಗಳು ಬಂಡವಾಳ ಹೂಡಿಕೆ ಸಂಬಂಧ ದೇಶದಾದ್ಯಂತ ಸಂಚರಿಸಿ ರೋಡ್‌ಶೋ ನಡೆಸಲಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕೈಗಾರಿಕಾ ನೀತಿ–2016ರ ಪ್ರಕಾರ, 10 ವರ್ಷಗಳಲ್ಲಿ ಕೈಗಾರಿಕಾ ವಲಯದಲ್ಲಿ ₹20 ಸಾವಿರ ಕೋಟಿ ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸಲಾಗಿತ್ತು.ಕಳೆದ ಐದು ವರ್ಷಗಳಲ್ಲಿ ಹೊರರಾಜ್ಯಗಳಿಂದ ₹5,000 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆ ಪ್ರಸ್ತಾವಗಳು ಬಂದಿವೆ ಎಂದು ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆಯ ಅಂಕಿ–ಅಂಶಗಳು ಉಲ್ಲೇಖಿಸಿವೆ.

ಹೊರ ರಾಜ್ಯದ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಕೈಗಾರಿಕೆಗಳನ್ನು ತೆರೆಯುವುದರಿಂದ ಕಣಿವೆಯಲ್ಲಿ ಸಂಕಷ್ಟದಲ್ಲಿರುವ ಕೈಗಾರಿಕಾ ವಲಯ ಚೈತನ್ಯ ಪಡೆಯಲಿದೆ ಎಂದು ಸ್ಥಳೀಯ ಕೈಗಾರಿಕೋದ್ಯಮಿಯೊಬ್ಬರು ಆಶಾಭಾವ ವ್ಯಕ್ತಪಡಿಸಿದ್ದಾರೆ.

‘ಅಗತ್ಯ ಮೂಲಸೌಕರ್ಯಗಳನ್ನು ಒದಗಿಸದಿದ್ದರೆ, ಹೊರಗಿನ ಬಂಡವಾಳ ಹೂಡಿಕೆದಾರರು ಬರುವುದಿಲ್ಲ’ ಎಂದು ಅವರು ಎಚ್ಚರಿಸಿದ್ದಾರೆ.

**

ಕಣಿವೆ ಈಗ ನಿರ್ಬಂಧಮುಕ್ತ: ಶಾ

ಜಮ್ಮು ಕಾಶ್ಮೀರದ ಯಾವುದೇ ಭಾಗದಲ್ಲಿ ಈಗ ನಿರ್ಬಂಧ ಇಲ್ಲ ಎಂದಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಎಲ್ಲ 196 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕರ್ಫ್ಯೂ ಹಿಂಪಡೆಯಲಾಗಿದೆ ಎಂದರು. ಆದರೆ 8 ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.

ಕೆಲವೇ ದಿನಗಳಲ್ಲಿ ಕಣಿವೆ ಸಹಜ ಸ್ಥಿತಿಗೆ ಮರಳಲಿದ್ದು, ನಿರ್ಬಂಧ ಹೇರಿಕೆ ಮುಂದುವರಿದಿದೆ ಎಂಬ ವಿಚಾರವು ಕೆಲವರ ಮನಸ್ಸಿನಲ್ಲಿ ಮಾತ್ರ ಉಳಿದುಕೊಂಡಿದೆ ಎಂದು ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

**

ಜಮ್ಮು ಮತ್ತು ಕಾಶ್ಮೀರವು ಮುಂದಿನ 10 ವರ್ಷಗಳಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದ ವಲಯ ಎಂಬ ಹಿರಿಮೆ ಪಡೆಯಲಿದೆ
- ಅಮಿತ್ ಶಾ, ಕೇಂದ್ರ ಗೃಹಸಚಿವ

**

ಕಾಶ್ಮೀರದಲ್ಲಿ ಹೂಡಿಕೆ ಪ್ರಮಾಣ (ದೇಶದ ಹೋಲಿಕೆಯಲ್ಲಿ)

2014;0.07%

2015;0.21%

2016;0.24%

2017;0.25%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.