ADVERTISEMENT

ಎನ್‌ಡಿಎ ಸರ್ಕಾರದ ಅಡಿಯಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 11:56 IST
Last Updated 23 ಮಾರ್ಚ್ 2021, 11:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಸಮಾಜದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ ಎಂದು ಕಾಂಗ್ರೆಸ್‌ ಮಂಗಳವಾರ ಆರೋಪಿಸಿದೆ. ಈ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿಯು, ಬಡವರ ಕಲ್ಯಾಣಕ್ಕಾಗಿಪ್ರಧಾನಿನರೇಂದ್ರ ಮೋದಿ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.

2021ರ ಹಣಕಾಸು ಮಸೂದೆಯ ಚರ್ಚೆಯನ್ನು ಪ್ರಾರಂಭಿಸಿದ ಕಾಂಗ್ರೆಸ್ ಸದಸ್ಯ ಅಮರ್ ಸಿಂಗ್, 'ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಮತ್ತು ದೇಶದ ಶೇ 73 ರಷ್ಟು ಸಂಪತ್ತು ಜನಸಂಖ್ಯೆಯ ಕೇವಲ 1 ಪ್ರತಿಶತದಷ್ಟು ಜನರಿಗೆ ಹೋಗುತ್ತಿದೆ. ಅಸಮಾನತೆಯು ವೇಗವಾಗಿ ಹೆಚ್ಚಾಗುತ್ತಿದೆ'. ಕೃಷಿಯನ್ನು ಹೊರತುಪಡಿಸಿ, ಕೇಂದ್ರ ಸರ್ಕಾರವು ಅಳವಡಿಸಿಕೊಂಡಿರುವ 'ತಪ್ಪು' ನೀತಿಗಳಿಂದಾಗಿ ಎಲ್ಲಾ ಕ್ಷೇತ್ರಗಳು ತೊಂದರೆ ಅನುಭವಿಸುತ್ತಿವೆ ಎಂದು ಸಿಂಗ್ ಹೇಳಿದರು.

ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಮಾದರಿ ಸಮೀಕ್ಷೆಯನ್ನು ನಡೆಸಿದರೆ, ಅದು ಆರ್ಥಿಕತೆಗೆ ಶೇ 45 ರಿಂದ 50 ರಷ್ಟು ಕೊಡುಗೆ ನೀಡುತ್ತಿದೆ ಮತ್ತು ಅಷ್ಟೇ ಸಂಖ್ಯೆಯ ಜನರಿಗೆ ಉದ್ಯೋಗವನ್ನು ನೀಡುತ್ತಿದೆ. ಆದರೆ ಈ ವಲಯವು ಅತ್ಯಂತ ಕೆಟ್ಟ ಹೊಡೆತಕ್ಕೆ ಸಿಲುಕಿದೆ ಎಂದು ಅವರು ಹೇಳಿದರು.

ADVERTISEMENT

ಅಗತ್ಯ ವಸ್ತುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದರೆ, ಸರ್ಕಾರವು ಶ್ರೀಮಂತರಿಗೆ ಮಾತ್ರ ತೆರಿಗೆ ಪರಿಹಾರ ನೀಡಿದೆ. ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಕಡಿಮೆಯಾಗಿದ್ದು, ಇದು ಬಡವರಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಸಿಂಗ್ ಆರೋಪಿಸಿದರು.

ಆಕ್ರೋಶಕ್ಕೆ ಒಳಗಾದ ರೈತರ ಬೇಡಿಕೆಯಂತೆ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದೂ ಅವರು ಒತ್ತಾಯಿಸಿದರು.

ಬಿಜೆಪಿ ಸದಸ್ಯ ರಾಜೇಂದ್ರ ಅಗರ್‌ವಾಲ್ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರವು ಬಡವರು, ವಂಚಿತರು, ಹಿಂದುಳಿದವರು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ದಣಿವರಿಯದೆ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದಲೂ, ಯಾವುದೇ ವಿರಾಮ ತೆಗೆದುಕೊಳ್ಳದೆ ಬಡ ಮತ್ತು ದೀನ ದಲಿತರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಕಳೆದ ವರ್ಷ ಜಾರಿಗೆ ಬಂದ ಮೂರು ಕೃಷಿ ಕಾಯ್ದೆಗಳು ರೈತರಿಗೆ ಪ್ರಯೋಜನಕಾರಿಯಾಗಿದ್ದು, ಈಗಾಗಲೇ ಅನೇಕ ರೈತರು ಇದರ ಲಾಭ ಪಡೆದಿದ್ದಾರೆ. ದೇಶದ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳ ಕೆಟ್ಟ ಸ್ಥಿತಿಗೆ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಕಾರಣವೆಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.