ADVERTISEMENT

ಇನ್ಫೊಸಿಸ್‌ ಪ್ರತಿಷ್ಠಾನದ ನೋಂದಣಿ ರದ್ದು

ಕೋರಿಕೆ ಮೇರೆಗೆ ಕ್ರಮ; ಪ್ರತಿಷ್ಠಾನದ ಸ್ಪಷ್ಟನೆ

ಪಿಟಿಐ
Published 13 ಮೇ 2019, 19:47 IST
Last Updated 13 ಮೇ 2019, 19:47 IST
ಸುಧಾ ಮೂರ್ತಿ
ಸುಧಾ ಮೂರ್ತಿ   

ನವದೆಹಲಿ: ಇನ್ಫೊಸಿಸ್‌ ಪ್ರತಿಷ್ಠಾನದ ಮನವಿ ಮೇರೆಗೆ ಅದರ ನೋಂದಣಿಯನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘನೆ ಆರೋಪದ ಮೇಲೆ ನೋಂದಣಿ ರದ್ದುಪಡಿಸಲಾಗಿದೆ ಎಂದು ಇದಕ್ಕೂ ಮೊದಲು ಅಧಿಕಾರಿಯೊಬ್ಬರು ತಿಳಿಸಿದ್ದರು. ಆನಂತರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವಾಲಯದ ವಕ್ತಾರ, ಪ್ರತಿಷ್ಠಾನವು ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಪ್ರತಿಷ್ಠಾನವು, ಯಾವುದೇ ನಿಯಮ ಉಲ್ಲಂಘಿಸಿಲ್ಲ. ಪ್ರತಿಷ್ಠಾನವು ‘ಎಫ್‌ಸಿಆರ್‌ಎ’ ಕಾಯ್ದೆಯಡಿ ಬರದೇ ಇರುವುದರಿಂದ ನೋಂದಣಿ ರದ್ದುಪಡಿಸುವಂತೆ ಮನವಿ ಮಾಡಲಾಗಿತ್ತು. ಹೀಗಾಗಿ ಗೃಹ ಸಚಿವಾಲಯ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದೆ.

ADVERTISEMENT

‘ನಮ್ಮ ಮನವಿಗೆ ಸ್ಪಂದಿಸಿ ನೋಂದಣಿ ರದ್ದುಪಡಿಸಿರುವುದಕ್ಕೆ ಗೃಹ ಸಚಿವಾಲಯಕ್ಕೆ ಧನ್ಯವಾದಗಳು’ ಎಂದು ಪ್ರತಿಷ್ಠಾನದ ಕಾರ್ಪೊರೇಟ್‌ ಮಾರ್ಕೆಟಿಂಗ್‌ ಆ್ಯಂಡ್‌ ಕಮ್ಯುನಿಕೇಷನ್ಸ್‌ ವಿಭಾಗದ ರಿಶಿ ಬಸು ಹೇಳಿದ್ದಾರೆ.

ವಿದೇಶಿ ದೇಣಿಗೆ ಪಡೆಯಲು ಸರ್ಕಾರಿಯೇತರ ಎಲ್ಲಾ ಸಂಘ ಸಂಸ್ಥೆಗಳು (ಎನ್‌ಜಿಒ) ‘ಎಫ್‌ಸಿಆರ್‌ಎ‘ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

ಪ್ರತಿಷ್ಠಾನವು 2016ರ ಜನವರಿ 1 ರಂದು ಈ ಕಾಯ್ದೆಯಡಿ ನೋಂದಾಯಿಸಿಕೊಂಡಿತ್ತು. 2016ರ ಮೇ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಹಣಕಾಸು ಮಸೂದೆಯ ಮೂಲಕ ಕಾಯ್ದೆಗೆ ತಿದ್ದುಪಡಿ ತಂದು, 2010ರ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಮಾಡಿತು. ಇದರಿಂದಾಗಿ ಪ್ರತಿಷ್ಠಾನವು ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ನೋಂದಣಿ ರದ್ದುಪಡಿಸುವಂತೆ 2016ರ ಜೂನ್‌ನಲ್ಲಿ ಮನವಿ ಸಲ್ಲಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

2016, 2017 ಮತ್ತು 2018ನೇ ಹಣಕಾಸು ವರ್ಷದ ವಾರ್ಷಿಕ ಲೆಕ್ಕಪತ್ರಗಳನ್ನು ಸಲ್ಲಿಸಲಾಗಿದೆ. ಯಾವುದೇ ವಿದೇಶಿ ದೇಣಿಗೆ ಪಡೆದಿಲ್ಲ ಎನ್ನುವುದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಪತ್ರಗಳನ್ನೂ ಸರ್ಕಾರಕ್ಕೆ ಸಲ್ಲಿಸಲಾಗಿದೆ.

2018ರ ಏಪ್ರಿಲ್‌ ನಂತರ ಹಣಕಾಸು ಲೆಕ್ಕಪತ್ರ ಸಲ್ಲಿಸುವಂತೆ ‘ಎಫ್‌ಸಿಆರ್‌ಎ’ನಿಂದ ಯಾವುದೇ ನೋಟಿಸ್‌ ಬಂದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಆದರೆ, ಕಾಯ್ದೆ ಉಲ್ಲಂಘನೆ ಮತ್ತು ಆರು ವರ್ಷಗಳವರೆಗೆ ವಾರ್ಷಿಕ ವರಮಾನ ಮತ್ತು ವೆಚ್ಚದ ಲೆಕ್ಕಪತ್ರಗಳನ್ನು ಸಲ್ಲಿಸದೇ ಇರುವುದಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡಿರುವುದಾಗಿ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕಾಯ್ದೆಯಲ್ಲಿ ನೋಂದಣಿ ಮಾಡಿಕೊಂಡಿರುವವರು ಪ್ರತಿ ಹಣಕಾಸು ವರ್ಷದ ವರಮಾನ ಮತ್ತು ವೆಚ್ಚದ ಮಾಹಿತಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕು. ವಿದೇಶಿ ದೇಣಿಗೆ ಪಡೆಯದೇ ಇದ್ದರೂ ಆ ನಿರ್ದಿಷ್ಟ ಹಣಕಾಸು ವರ್ಷಕ್ಕೆ ಲೆಕ್ಕಪತ್ರದ ಮಾಹಿತಿ ನೀಡಲೇಬೇಕು ಎನ್ನುವ ನಿಯಮ ಇದೆ.

1996ರಲ್ಲಿ ಸ್ಥಾಪನೆಯಾಗಿರುವ ಇನ್ಫೊಸಿಸ್‌ ಪ್ರತಿಷ್ಠಾನವು ಶಿಕ್ಷಣ, ಗ್ರಾಮೀಣ ಅಭಿವೃದ್ದಿ, ಆರೋಗ್ಯ ಸೇವೆ, ಕಲೆ ಮತ್ತು ಸಂಸ್ಕೃತಿಯಂತಹ ಸಾಮಾಜಿಕ ಕಾರ್ಯಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಇನ್ಫೊಸಿಸ್‌ನ ಸಹ ಸ್ಥಾಪಕರಾದ ಎನ್‌. ಆರ್‌. ನಾರಾಯಣಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ಈ ಪ್ರತಿಷ್ಠಾನದ ಅಧ್ಯಕ್ಷೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.