ಬಿಲಾಸ್ಪುರ: ರಾಯ್ಪುರದ ಸಾರ್ವಜನಿಕ ಆಸ್ಪತ್ರೆಯೊಂದರಲ್ಲಿ ನವಜಾತ ಶಿಶುವಿನ ತಾಯಿಗೆ ಎಚ್‌ಐವಿ ದೃಢಪಟ್ಟಿರುವ ವಿಚಾರವನ್ನು ಆಸ್ಪತ್ರೆಯ ಸಿಬ್ಬಂದಿ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ಈ ಕೃತ್ಯವನ್ನು ಛತ್ತೀಸಗಢ ಹೈಕೋರ್ಟ್, ಅಮಾನವೀಯ, ಅನೈತಿಕ ಕೃತ್ಯವೆಂದು ಟೀಕಿಸಿದ್ದು, ಶಿಶುವಿನ ಪೋಷಕರಿಗೆ ₹2 ಲಕ್ಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಡಾ.ಭೀಮರಾವ್ ಅಂಬೇಡ್ಕರ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಹಾಸಿಗೆಯ ಬಳಿಯೇ ಮಗುವಿನ ತಾಯಿಗೆ ಎಚ್‌ಐವಿ ದೃಢಪಟ್ಟಿರುವ ಪೋಸ್ಟರ್ ಅನ್ನು ಸಿಬ್ಬಂದಿ ಇರಿಸಿದ್ದರು.
ಕೃತ್ಯದ ಬಗ್ಗೆ ಮಗುವಿನ ತಂದೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಚಾರವನ್ನು ಮಾಧ್ಯಮವೊಂದು ವರದಿ ಮಾಡಿತ್ತು. ಮಾಧ್ಯಮಗಳ ವರದಿಯನ್ನು ಗಮನಿಸಿದ ಹೈಕೋರ್ಟ್, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಾಗಿ ಪರಿಗಣಿಸಿ, ವಿಚಾರಣೆ ನಡೆಸಿದೆ.
ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ, ನ್ಯಾಯಮೂರ್ತಿ ಬಿಭು ದತ್ತಾ ಗುರು ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿ, ಗೋಪ್ಯತೆ ಶಿಷ್ಟಾಚಾರ ಪಾಲನೆಯಲ್ಲಿ ಆಸ್ಪತ್ರೆ ವಿಫಲವಾಗಿದೆ ಎಂದು ಪರಿಗಣಿಸಿ, ₹2 ಲಕ್ಷ ಪರಿಹಾರಕ್ಕೆ ಆದೇಶಿಸಿದೆ. ರಾಜ್ಯ ಸರ್ಕಾರದ ಕಾರ್ಯದರ್ಶಿ ಪ್ರಕರಣ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಿದ್ದು, ಪ್ರಕರಣದ ಸೂಕ್ತ ತನಿಖೆ ನಡೆಸಲು ಸಮಿತಿ ರಚಿಸಿರುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.