ADVERTISEMENT

₹50 ಲಕ್ಷ ವಿಮೆ ಹಣಕ್ಕಾಗಿ ಹೆಣವಾದ

ತನ್ನ ಕೊಲೆಗೆ ತಾನೇ ಯೋಜನೆ ರೂಪಿಸಿ ಜೀವ ಕಳೆದುಕೊಂಡ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 19:45 IST
Last Updated 10 ಸೆಪ್ಟೆಂಬರ್ 2019, 19:45 IST
   

ಜೈಪುರ : ಸಾವಿನ ನಂತರ ಬರುವ ₹50 ಲಕ್ಷ ವಿಮೆ ಹಣದಿಂದ ತನ್ನ ಕುಟುಂಬ ಸದಸ್ಯರು ಜೀವನಪೂರ್ತಿ ಆರಾಮವಾಗಿರಬಹುದು ಎಂದು ನಂಬಿದ್ದ ವ್ಯಕ್ತಿಯೊಬ್ಬ, ತನ್ನ ಹತ್ಯೆಗೆ ತಾನೇ ಯೋಜನೆ ರೂಪಿಸಿದ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಲೇವಾದೇವಿಗಾರ ಬಲ್ಬೀರ್ ಖರೂಲ್ (38) ಎಂಬಾತನೇ ಪ್ರಕರಣದ ಕೇಂದ್ರಬಿಂದು. ಸರಿಯಾಗಿ ಸಾಲ ವಸೂಲಿ ಮಾಡಲು ಸಾಧ್ಯವಾಗದೇ ಈತ ಈ ವಿಲಕ್ಷಣ ನಿರ್ಧಾರಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಖರೂಲ್ ಹತ್ಯೆ ಆರೋಪದಲ್ಲಿ ರಾಜ್‌ವೀರ್ ಸಿಂಗ್ ಮತ್ತು ಸುನಿಲ್ ಯಾದವ್ ಎಂಬುವರನ್ನು ಪೊಲೀಸರು ಸೋಮವಾರ ಬಂಧಿಸಿದ್ದರು. ವಿಮೆ ಹಣಕ್ಕಾಗಿ ಖರೂಲ್ ಹತ್ಯೆ ಮಾಡಲಾಗಿದೆ ಎಂಬ ಅಂಶವನ್ನು ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ.

ADVERTISEMENT

ಆರಂಭದಲ್ಲಿ ಅಪಘಾತದಲ್ಲಿ ಸಾಯುವ ನಿರ್ಧಾರಕ್ಕೆ ಬಂದಿದ್ದ ಖರೂಲ್, ಒಂದು ವೇಳೆ ಅಪಘಾತದಲ್ಲಿ ಬದುಕುಳಿದರೆ ಕಷ್ಟ ಎಂದು ತನ್ನ ಯೋಜನೆಯನ್ನು ಬದಲಿಸಿದ್ದ ಎಂದು ಪೊಲೀಸ್ ಆಯುಕ್ತ ಹರೇಂದ್ರ ಮಹಾವರ್ ಅವರು ತಿಳಿಸಿದ್ದಾರೆ.

₹20 ಲಕ್ಷದಷ್ಟು ಸಾಲ ನೀಡಿದ್ದ ಖರೂಲ್‌ಗೆ ಅದನ್ನು ವಸೂಲಿ ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ ಆರು ತಿಂಗಳಲ್ಲಿ ಸಾಲ ವಸೂಲಿಯೇ ಆಗಿರಲಿಲ್ಲ. ಮೃತಪಟ್ಟರೆ, ಕೊನೇ ಪಕ್ಷ ಕುಟುಂಬದವರಾದರೂ ಸುಖವಾಗಿರುತ್ತಾರೆ ಎಂದು ಖರೂಲ್ ಭಾವಿಸಿದ್ದ.

ಹಿಂದಿನ ತಿಂಗಳು ವಿಮೆ ಖರೀದಿಸಿ, ಮೊದಲ ಕಂತು ಕಟ್ಟಿದ್ದ. ಕೊಲೆ ಮಾಡಿದರೆ ₹80 ಸಾವಿರ ನೀಡುವುದಾಗಿ ಆರೋಪಿ ಯಾದವ್‌ ಜತೆ ಮಾತುಕತೆಯಾಗಿತ್ತು. ಅದರ ಪ್ರಕಾರ ಸೆ.2ರಂದು ಮುಂಗಡವಾಗಿ ₹10 ಸಾವಿರ ಪಾವತಿಯಾಗಿತ್ತು.

ನಿರ್ಜನ ಪ್ರದೇಶಕ್ಕೆ ಆರೋಪಿಗಳ ಜತೆ ತೆರಳಿದ್ದ ಖರೂಲ್, ಕೊಲೆಯ ಬಳಿಕ ಬಾಕಿ ಹಣವನ್ನು ತಮ್ಮ ಜೇಬಿನಿಂದ ಪಡೆಯುವಂತೆ ಅವರಿಗೆ ತಿಳಿಸಿದ್ದ. ಅದರಂತೆ ಖರೂಲ್‌ನ ಕೈಕಾಲು ಕಟ್ಟಿಹಾಕಿ ಕುತ್ತಿಗೆ ಹಿಸುಕಲಾಗಿತ್ತು. ದೂರವಾಣಿ ಕರೆ ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.