ADVERTISEMENT

ಮರ್ಯಾದೆಗೇಡು ಹತ್ಯೆ: ತಂಗಿ, ಭಾವನ ಮನೆಗೆ ಕರೆಸಿ, ಊಟ ಹಾಕಿ ಬರ್ಬರವಾಗಿ ಕೊಂದ ಅಣ್ಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜೂನ್ 2022, 7:42 IST
Last Updated 14 ಜೂನ್ 2022, 7:42 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕುಂಭಕೋಣಂ:ತಮಿಳನಾಡಿನಲ್ಲಿ ಮರ್ಯಾದೆಗೇಡು ಹತ್ಯೆಪ್ರಕರಣ ಬೆಳಕಿಗೆ ಬಂದಿದ್ದು 5 ದಿನಗಳ ಹಿಂದೆ ಪ್ರೇಮ ವಿವಾಹವಾದ ತಂಗಿ ಮತ್ತು ಭಾವನನ್ನು ಅಣ್ಣ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

24 ವರ್ಷದ ಶರಣ್ಯಾ ಹಾಗೂ 31 ವರ್ಷದ ಮೋಹನ್‌ ಮೃತಪಟ್ಟವರು ಎಂದು ಕುಂಭಕೋಣಂ ಪೊಲೀಸರು ತಿಳಿಸಿದ್ದಾರೆ.

ಶರಣ್ಯಾ ಕುಂಭಕೋಣಂ ಸಮೀಪದ ತುಳುಕ್ಕವೇಲಿ ಗ್ರಾಮದ ನಿವಾಸಿಯಾಗಿದ್ದು,ನರ್ಸಿಂಗ್‌ ಪದವಿ ಪಡೆದ ಬಳಿಕ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.ತಿರುವಣ್ಣಾಮಲೈ ಸಮೀಪದ ಪೊನ್ನೂರಿನ ಮೋಹನ್‌ 6 ತಿಂಗಳ ಹಿಂದೆ ಶರಣ್ಯಾ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು. ನಂತರದ ದಿನಗಳಲ್ಲಿ ಇವರ ಪರಿಚಯ ಪ್ರೀತಿಗೆ ತಿರುಗಿತ್ತು.

ADVERTISEMENT

ಶರಣ್ಯಾ ಪ್ರೀತಿಯ ವಿಚಾರ ಅವರ ಮನೆಯವರಿಗೂಗೊತ್ತಾಗಿತ್ತು. ಅಣ್ಣ ಶಕ್ತಿವೇಲುತಂಗಿಗೆ ಬುದ್ದಿ ಹೇಳಿ, ಸೋದರ ಮಾವ ರಂಜಿತ್‌ನನ್ನು ಮದುವೆಯಾಗುವಂತೆ ಹೇಳಿದ್ದರು. ಇದರಿಂದ ಗಾಬರಿಗೊಂಡ ಶರಣ್ಯಾ ಚೆನ್ನೈನಲ್ಲಿ ಮೋಹನ್‌ನನ್ನು ಪ್ರೇಮ ವಿವಾಹವಾದರು. ನಂತರ ಪೋಷಕರಿಗೆ ದೂರವಾಣಿ ಮೂಲಕ ಮದುವೆಯಾಗಿರುವ ವಿಚಾರ ತಿಳಿಸಿದ್ದರು.

ಮದುವೆಯಾಗಿ 5 ದಿನಗಳ ಬಳಿಕ ತಂಗಿಗೆ ಫೋನ್‌ ಮಾಡಿದ್ದ ಶಕ್ತಿವೇಲು, ನಿಮ್ಮ ಮದುವೆ ಒಪ್ಪಿಕೊಂಡಿದ್ದು, ಭಾವನ ಜೊತೆಯಲ್ಲಿ ಮನೆಗೆ ಬರುವಂತೆ ಹೇಳಿದ್ದನು. ಅಣ್ಣನ ಮಾತು ಕೇಳಿ ಶರಣ್ಯಾ, ಮೋಹನ್‌ ಜೊತೆ ಮನೆಗೆ ಬಂದಿದ್ದರು. ಅವರು ಊಟ ಮಾಡಿದ ಬಳಿಕಚೆನ್ನೈಗೆ ಹೋಗಲು ತಯಾರಿ ಮಾಡಿಕೊಳ್ಳುತ್ತಿದ್ದರು. ಇದೇ ವೇಳೆ ಶಕ್ತಿವೇಲು ಚೂಪಾದ ಆಯುಧದಿಂದ ಶರಣ್ಯಾ ಹಾಗೂ ಮೋಹನ್‌ ಕತ್ತು ಸೀಳಿದ್ದಾನೆ.

ತೀವ್ರವಾಗಿ ಗಾಯಗೊಂಡಿದ್ದಶರಣ್ಯಾ ಮತ್ತು ಮೋಹನ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ಶಕ್ತಿವೇಲು ಸ್ಥಳೀಯ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ. ತಂಗಿ ಭಾವನನ್ನು ಹತ್ಯೆ ಮಾಡುವ ಸಲುವಾಗಿ ಶಕ್ತಿವೇಲು ಸಂಚು ರೂಪಿಸಿ ಅವರನ್ನು ಮನೆಗೆ ಕರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶರಣ್ಯಾ ಎಸ್‌ಸಿ ಸಮುದಾಯಕ್ಕೆ ಸೇರಿದ್ದರೆ, ಮೋಹನ್ ಮುದಲಿಯಾರ್ (ಬಿಸಿ) ಸಮುದಾಯದವರು. ಬೇರೆ ಸಮುದಾಯದವರನ್ನು ಶರಣ್ಯಾ ಮದುವೆಯಾಗಿದ್ದು ಸಮಾಜದಲ್ಲಿ ನಮ್ಮ ಕುಟುಂಬದ ಮರ್ಯಾದೆ ಹೋಯಿತು ಎಂಬ ಕಾರಣಕ್ಕೆ ಈ ಹತ್ಯೆ ಮಾಡಲಾಗಿದೆ ಎಂದು ಪೊಲೀಸರುಹೇಳಿದ್ದಾರೆ.

ತಂಜಾವೂರು ಎಸ್ಪಿ ಜಿ.ರವಳಿ ಪ್ರಿಯಾಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.