ADVERTISEMENT

ಅಮೆರಿಕ ಜತೆಗಿನ ಉದ್ವಿಗ್ನತೆ ನಡುವೇ 'ಭೂಗತ ಕ್ಷಿಪಣಿ ನೆಲೆ' ಅನಾವರಣ ಮಾಡಿದ ಇರಾನ್‌

ರಾಯಿಟರ್ಸ್
Published 8 ಜನವರಿ 2021, 10:53 IST
Last Updated 8 ಜನವರಿ 2021, 10:53 IST
ಇರಾನ್‌ ಸೇನೆಯ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್' ನಿರ್ಮಿಸಿರುವ ಭೂಗತ ಕ್ಷಿಪಣಿ ನೆಲೆ
ಇರಾನ್‌ ಸೇನೆಯ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್' ನಿರ್ಮಿಸಿರುವ ಭೂಗತ ಕ್ಷಿಪಣಿ ನೆಲೆ    

ದುಬೈ: ಇರಾನ್‌ ಸೇನೆಯ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್' ಕೊಲ್ಲಿ ಪ್ರದೇಶದ ಅಜ್ಞಾತ ಪ್ರದೇಶದಲ್ಲಿ ಭೂಗತ ಕ್ಷಿಪಣಿ ನೆಲೆಯೊಂದನ್ನು ಶುಕ್ರವಾರ ಅನಾವರಣಗೊಳಿಸಿದೆ. ಈ ಬಗ್ಗೆ ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇರಾನ್‌ ಮತ್ತು ಅಮೆರಿಕದ ನಡುವೆ ಉದ್ವಿಗ್ನತೆ ಮನೆ ಮಾಡಿರುವ ಸಂದರ್ಭದಲ್ಲಿಯೇ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್' ಕ್ಷಿಪಣಿ ನೆಲೆ ಅನಾವರಣ ಮಾಡಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ.

ಇದನ್ನೂ ಓದಿ: Explainer | ಅಮೆರಿಕವನ್ನು ಮಣಿಸಬಲ್ಲದೇ ಇರಾನ್‌ ಸೇನೆ? ಏಕೆ ಈ ಸಂಘರ್ಷ? ಮುಂದೇನು?

'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್'ನ 'ಕ್ಷಿಪಣಿ ಕಾರ್ಯತಂತ್ರ'ದ ಹಲವು ಭೂಗತ ಕ್ಷಿಪಣಿ ನೆಲೆಗಳಲ್ಲಿ ಶುಕ್ರವಾರ ಅನಾವರಣಗೊಂಡಿರುವ ನೆಲೆಯೂ ಒಂದು ಎಂದು ಗಾರ್ಡ್ಸ್‌ ಮುಖ್ಯಸ್ಥ ಮೇಜರ್ ಜನರಲ್ ಹೊಸೆನ್ ಸಲಾಮಿ ಹೇಳಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಕೊಲ್ಲಿಯ ಕರಾವಳಿ ಪ್ರದೇಶದಲ್ಲಿ ಇರಾನ್ ಭೂಗತ 'ಕ್ಷಿಪಣಿ ನಗರಗಳನ್ನು' ನಿರ್ಮಿಸಿದೆ. ಇದು ಇರಾನ್‌ನ ಶತ್ರುಗಳಿಗೆ ದುಃಸ್ವಪ್ನವಾಗಲಿದೆ. ಕ್ಷಿಪಣಿಗಳು ನೂರಾರು ಕಿಲೋಮೀಟರ್‌ನ ಗಮ್ಯವನ್ನು ತಲುಪುವ ಸಾಮರ್ಥ್ಯ ಹೊಂದಿವೆ. ನಿಖರತೆ ಮತ್ತು ಬೃಹತ್ ವಿನಾಶಕಾರಿ ಶಕ್ತಿಯನ್ನು ಹೊಂದಿವೆ. ಶತ್ರುಗಳ ಎಲೆಕ್ಟ್ರಾನಿಕ್ ಯುದ್ಧ ಸಾಧನಗಳ ಮೇಲೆ ನಾವು ಪ್ರಭುತ್ವ ಸಾಧಿಸಬಲ್ಲೆವು' ಎಂದು ಸಲಾಮಿ ಕಳೆದ ವರ್ಷ ಹೇಳಿದ್ದರು.

2015ರ ಪರಮಾಣು ಒಪ್ಪಂದದಿಂದ 2018ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಗಮಿಸಿದ ನಂತರ ಮತ್ತು ಇರಾನ್‌ ಮೇಲೆ ಆರ್ಥಿಕ ದಿಗ್ಭಂದನವನ್ನು ಮರುಜಾರಿಗೊಳಿಸಿದ ನಂತರ ಅಮೆರಿಕ ಮತ್ತು ಇರಾನ್‌ ನಡುವೆ ಉದ್ವಿಗ್ನತೆ ಮನೆ ಮಾಡಿದೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ ಕಮಾಂಡರ್‌ ಮೇಜರ್‌ ಜನರಲ್‌ ಆಗಿದ್ದ ಖಾಸಿಂ ಸುಲೇಮಾನಿ ಅವರನ್ನು ಬಾಗ್ದಾದ್‌ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಅಮೆರಿಕವು ಕಳೆದ ವರ್ಷ ಕ್ಷಿಪಣಿ ದಾಳಿ ಮೂಲಕ ಹತ್ಯೆ ಮಾಡಿತು. ಈ ಘಟನೆ ನಂತರ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.