ADVERTISEMENT

ಶ್ರೀನಗರದಲ್ಲಿ ಮರುಕಳಿಸಿದ ಉಗ್ರ ಚಟುವಟಿಕೆ?

ಜನರ ಹತಾಶೆ ಹಾಗೂ ನಿರಾಶೆಯ ಲಾಭ ಪಡೆಯಲು ಮುಂದಾದ ಉಗ್ರರು

ಸಿದ್ದರಾಜು ಎಂ.
Published 21 ಮೇ 2020, 19:45 IST
Last Updated 21 ಮೇ 2020, 19:45 IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬೇಸಿಗೆಯ ರಾಜಧಾನಿ ಶ್ರೀನಗರದಲ್ಲಿ ಉಗ್ರ ಚಟುವಟಿಕೆಗಳು ಮರುಕಳುಹಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಕೆಲ ದಿನಗಳ ಹಿಂದೆ ಪೊಲೀಸರು ಶೂನ್ಯ ಉಗ್ರ ಚಟುವಟಿಕೆ ವಲಯ ಎಂದು ಗುರುತಿಸಲಾಗಿರುವ ಶ್ರೀನಗರದ ಹೊರವಲಯದಲ್ಲಿ ಬುಧವಾರ ಉಗ್ರರು ಅರೆಸೇನೆಪಡೆಯ ಇಬ್ಬರು ಬಿಎಸ್‌ಎಫ್‌ ಯೋಧರನ್ನು ಹತ್ಯೆ ಮಾಡಿರುವುದು ಉಗ್ರರ ಚಟುವಟಿಕೆ ಆರಂಭಕ್ಕೆ ನಿರ್ದಶನವಾಗಿದೆ.

ಶ್ರೀನಗರದ ಹಳೆಯ ಪ್ರದೇಶವಾದ ನವಕದಲ್‌ನಲ್ಲಿ ಈಚೆಗೆ ಹಿಜ್ಬುಲ್‌ ಮುಜಾಹಿದ್ದೀನ್‌ ಕಮಾಂಡರ್‌ ಜುನೈದ್‌ ಸೆಹ್ರಾಯ್‌ನನ್ನು ಭದ್ರತಾ ಪಡೆಗಳು ಹೊಡೆದು ಕೊಂದ ಮಾರನೇ ದಿನವೇ ಪಂದಚ್‌ನಲ್ಲಿ ಇಬ್ಬರು ಬಿಎಸ್‌ಎಫ್‌ ಯೋಧರನ್ನು ಹತ್ಯೆ ಮಾಡಲಾಗಿದೆ. ಅಲ್ಲದೇ ಯೋಧರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಕಸಿದು ಉಗ್ರರು ಪರಾರಿಯಾಗಿದ್ದಾರೆ.

ADVERTISEMENT

ನಗರದ ಅಲ್ಲಲ್ಲಿ ಆಗಾಗ್ಗೆ ಸಣ್ಫಪುಟ್ಟ ದಾಳಿಗಳು ನಡೆದಿದ್ದರೂ ಕಳೆದ 18 ತಿಂಗಳಿಂದ ಯಾವುದೇ ಭಾರಿ ಪ್ರಮಾಣದ ದಾಳಿಗಳು ನಡೆದಿರಲಿಲ್ಲ. ಉಗ್ರರ ವಿರುದ್ಧ ಭದ್ರತಾಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದರೂ ರಕ್ಷಣಾತ್ಮಕ ತಂತ್ರಕ್ಕೆ ಮೊರೆ ಹೋಗಬೇಕಿದ್ದ ಉಗ್ರರು ಭದ್ರತಾ ಪಡೆಗಳ ವಿರುದ್ಧವೇ ಪ್ರತಿದಾಳಿಗೆ ಮುಂದಾಗಿರುವುದು ಈಗ ಪೊಲೀಸರಿಗೆ ದೊಡ್ಡ ಚಿಂತೆಯಾಗಿದೆ.

ಹತ್ಯೆಯಾದ ಐಎಂ ಕಮಾಂಡರ್‌ ಜುನೈದ್‌ ಸೆಹ್ರಾಯ್‌ ಶ್ರೀನಗರದಲ್ಲಿ ಸ್ಥಳೀಯ ಯುವಕರನ್ನು ಸಭೆ ಸೇರಿಸಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿದ್ದ. ಸೆಹ್ರಾಯ್‌ ಹತ್ಯೆ ನಂತರ ಶ್ರೀನಗರ, ಬುಡ್ಗಾಂ, ಗಂಧರಬಲ್‌ ಜಿಲ್ಲೆಯಲ್ಲಿ 14 ಉಗ್ರರು ಸಕ್ರಿಯರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್‌ಬಾಗ್‌ ಸಿಂಗ್‌ ಎಂದು ಈಚೆಗೆ ಮಾಹಿತಿ ನೀಡಿದ್ದರು.

‘ಕಳೆದ ಎರಡು ವರ್ಷಗಳಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ (ಐಎಂ) ತಳಮಟ್ಟದ ಕಾರ್ಯಕರ್ತರ ನೆರವಿನೊಂದಿಗೆ ತನ್ನ ಸಾಮರ್ಥ್ಯ ವೃದ್ಧಿಯ ಜತೆಗೆ ಜಾಲವನ್ನು ವಿಸ್ತರಿಸಿಕೊಂಡಿದೆ. ಹಾಗಾಗಿ ಮನಬಂದಂತೆ ದಾಳಿ ನಡೆಸುತ್ತಿದ್ದಾರೆ’ ಎಂದು ಎಂದು ಮೂಲಗಳು ತಿಳಿಸಿವೆ.

ಬುಧವಾರ ಪದಂಚ್‌ ಬಳಿ ನಡೆದ ದಾಳಿಯೂ ಕೂಡ ಇದರ ಭಾಗವಾಗಿದೆ. 2018ರ ಮಾರ್ಚ್‌ ನಂತರ ಐಎಂ ಸಂಘಟನೆ ಸೇರಿದ ಜುನೈದ್‌ ಸೆಹ್ರಾಯ್‌, ಶ್ರೀನಗರದಲ್ಲಿ ಸ್ಥಳೀಯ ಯುವಕರನ್ನು ಬಳಸಿಕೊಂಡು ಶ್ರೀನಗರ ಹಾಗೂ ಗಂದರ್‌ಬಲ್‌ ಜಿಲ್ಲೆಯಲ್ಲಿ ಉಗ್ರ ಚಟುವಟಿಕೆ ಮರುಸ್ಥಾಪಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯೂ ಆಗಿದ್ದಾನೆ ಎಂದು ಅವರು ಹೇಳಿದರು.

ಉಗ್ರರಿಗೆ ಇರಲು ಮನೆ, ಜಾಗ ಹಾಗೂ ಮಾಹಿತಿ ರವಾನೆ, ಅವರು ತಪ್ಪಿಸಿಕೊಳ್ಳಲು ನೆರವು ನೀಡುವ ಜನರನ್ನು ಉಗ್ರರ ತಳಮಟ್ಟದ ಕಾರ್ಯಕರ್ತ ಎಂದು ಇಲ್ಲಿನ ಪೊಲೀಸರು ಪರಿಭಾವಿಸಿದ್ದಾರೆ.

‘ದಕ್ಷಿಣ ಕಾಶ್ಮೀರದಲ್ಲಿ ಅವಿರತವಾಗಿ ಭದ್ರತಾ ಪಡೆಗಳು ಶ್ರಮಿಸುತ್ತಿವೆ. ಹೀಗಾಗಿ ಮಧ್ಯ ಕಾಶ್ಮೀರದ ಶ್ರೀನಗರದಲ್ಲಿ ನೆಲೆ ಕಂಡುಕೊಳ್ಲಲು ಉಗ್ರರು ಹವಣಿಸುತ್ತಿದ್ದಾರೆ. ಮೊದಲು ಶ್ರೀನಗರದ ಜನ ಉಗ್ರರಿಗೆ ನೆರವು ನೀಡುತ್ತಿರಲಿಲ್ಲ ಹಾಗೂ ಇದರತ್ತ ಆಸಕ್ತಿ ತೋರುತ್ತಿರಲಿಲ್ಲ. ಆದರೆ ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ 2019ರ ಆಗಸ್ಟ್‌ ನಂತರ ಇಲ್ಲಿನ ಜನರಲ್ಲಿ ಉಂಟಾಗಿರುವ ಹತಾಶೆ, ನಿರಾಸೆಯ ಲಾಭವನ್ನು ಉಗ್ರರು ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಸಹಜವಾಗಿಯೇ ಇಂತಹ ಘಟನೆಗಳು ಆರಂಭವಾಗಿವೆ. ಉಗ್ರರ ಹಿಂಸಾತ್ಮಕ ಕೃತ್ಯಗಳು ಮತ್ತಷ್ಟು ನಡೆಯುವ ಸಾಧ್ಯತೆಯಿದೆ ಹಾಗಾಗಿ ನಾಗರಿಕರು ಧೈರ್ಯ ಕಳೆದುಕೊಳ್ಳದೇ ಎಚ್ಚರಿಕೆಯಿಂದ ಇರಬೇಕು. ಉಗ್ರರನ್ನು ಭದ್ರತಾ ಪಡೆಗಳು ಕೊಂದಿದ್ದಕ್ಕೆ ಇಂತಹ ಪ್ರತಿಕ್ರಿಯೆ ನಡೆಯುತ್ತಿವೆ. ಶ್ರೀನಗರದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವುದು ಅವರ ಗುರಿ. ಆದರೆ ನಾವು ಅವರ ಯತ್ನವನ್ನು ವಿಫಲಗೊಳಿಸುತ್ತೇವೆ’ ಎಂದು ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿರುವ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.