ADVERTISEMENT

ಕೊನೆಯಾಗಲಿದೆಯೇ ಇಷ್ರತ್‌ ಜಹಾಂ ಎನ್‌ಕೌಂಟರ್?

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:41 IST
Last Updated 25 ಜುಲೈ 2019, 19:41 IST
   

ಅಹಮದಾಬಾದ್‌: ಇಷ್ರತ್‌ ಜಹಾಂ ಅವರನ್ನು ಕೊಂದವರು ಯಾರು? ಈಗ, ಪ್ರಕರಣದಲ್ಲಿ ಆರೋಪಿಗಳೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.ಹಲವು ತಿರುವುಗಳನ್ನು‍ಪಡೆದ ಪ್ರಕರಣವು ಈಗ ಯಾವುದೇ ವಿಚಾರಣೆ ಇಲ್ಲದೆ ಕೊನೆ ಕಾಣಬಹುದು ಎನ್ನಲಾಗಿದೆ.

ಗುಜರಾತ್ ಪೊಲೀಸ್‌ ಇಲಾಖೆ ಮತ್ತು ಗುಪ್ತಚರ ಘಟಕದ (ಐ.ಬಿ) ಜಂಟಿ ಕಾರ್ಯಾಚರಣೆಯಲ್ಲಿ ಇಷ್ರತ್‌ ಜಹಾಂ ಎನ್‌ಕೌಂಟರ್‌ ನಡೆದಿದೆ ಎಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿ ಆರು ವರ್ಷಗಳಾಗಿವೆ. ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಮಾಜಿ ಪೊಲೀಸ್‌ ಅಧಿಕಾರಿಗಳಾದ ಡಿ.ಜಿ. ವಂಜಾರಾ ಮತ್ತು ನರೇಂದ್ರ ಅಮೀನ್‌ ಅವರನ್ನು ಕೈಬಿಟ್ಟು ವಿಶೇಷ ಸಿಬಿಐ ನ್ಯಾಯಾಲಯ ನೀಡಿದ ಆದೇಶ ಒಪ್ಪಿಕೊಂಡಿರುವುದಾಗಿ ಸಿಬಿಐ ಹೇಳಿದೆ. ಈ ಇಬ್ಬರು ಆರೋಪಿಗಳನ್ನು ಕೈಬಿಟ್ಟಿರುವುದರ ಆಧಾರದಲ್ಲಿಯೇ ಇತರ ನಾಲ್ವರು ಆರೋಪಿಗಳನ್ನೂ ಆರೋಪಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ. ಹಾಗಾದರೆ, ಯಾವುದೇ ವಿಚಾರಣೆ ಇಲ್ಲದೆ ಪ್ರಕರಣ ಕೊನೆಗಾಣಲಿದೆ.

‘ಈ ನ್ಯಾಯಾಲಯವು ನೀಡಿದ್ದ ಆದೇಶವನ್ನು ನಮ್ಮ ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ’ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆರ್‌.ಸಿ. ಕೊಡೇಕರ್‌ ಹೇಳಿದ್ದಾರೆ. ಈ ಒಪ್ಪಿಗೆಯನ್ನು ಲಿಖಿತವಾಗಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಬಳಿಕ, ಸಿಬಿಐ ಅಧಿಕಾರಿಗಳನ್ನು ಸಂಪರ್ಕಿಸಿದ ಕೊಡೇಕರ್‌ ಒಂದು ಪುಟದ ಲಿಖಿತ ಒಪ್ಪಿಗೆ ಪತ್ರವನ್ನು ಗುರುವಾರ ಸಲ್ಲಿಸಿದರು.

ADVERTISEMENT

ಈ ಇಬ್ಬರು ಅಧಿಕಾರಿಗಳ ತನಿಖೆ ನಡೆಸಲು ಗುಜರಾತ್‌ ಸರ್ಕಾರವು ಸಿಬಿಐಗೆ ಅಪರಾಧ ಪ್ರಕ್ರಿಯಾ ಸಂಹಿ ತೆಯ 197ನೇ ಸೆಕ್ಷನ್‌ ಅಡಿಯಲ್ಲಿ ಅನುಮತಿ ನೀಡಿರಲಿಲ್ಲ. ಅದಾದ ಬಳಿಕ, ಈ ಇಬ್ಬರನ್ನು ಆರೋಪಪಟ್ಟಿಯಿಂದ ಕೈಬಿಡುವ ನ್ಯಾಯಾಲಯದ ಆದೇಶವನ್ನು ಒಪ್ಪಿಕೊಂಡಿದ್ದಾಗಿ ಸಿಬಿಐ ಹೇಳಿದೆ. ಈ ಅಧಿಕಾರಿಗಳನ್ನು ಕೈಬಿಡಲು ಆದೇಶ ಕೊಟ್ಟ ಇದೇ ನ್ಯಾಯಾಲಯ ಈ ಹಿಂದೆ, ಇವರು ಆರೋಪಿಗಳು ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಹೇಳಿತ್ತು.

ಎನ್‌ಕೌಂಟರ್‌ನಲ್ಲಿ ನಾಲ್ವರ ಹತ್ಯೆ

ಅಹಮದಾಬಾದ್‌ನ ಹೊರವಲಯದಲ್ಲಿ 2004ರ ಜೂನ್‌ 14 ರಂದು 19 ವರ್ಷ ವಯಸ್ಸಿನ ಇಷ್ರತ್ ಜಹಾಂ, ಅವರ ಗೆಳೆಯ ಜಾವೇದ್‌ ಶೇಖ್‌ ಅಲಿಯಾಸ್‌ ಪ್ರಾಣೇಶ್‌ ಪಿಳ್ಳೆ ಮತ್ತು ಪಾಕಿಸ್ತಾನಿ ಪ್ರಜೆಗಳು ಎಂದು ಹೇಳಲಾದ ಅಮ್ಜದ್‌ ಅಲಿ ರಾಣಾ ಮತ್ತು ಜೀಷನ್‌ ಜೋಹರ್‌ ಅವರನ್ನು ಎನ್‌ ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಗುಜರಾತ್‌ ಪೊಲೀಸ್‌ ಇಲಾಖೆಯ ಏಳು ಅಧಿಕಾರಿಗಳು ಮತ್ತು ಐ.ಬಿ.ಯ ವಿಶೇಷ ನಿರ್ದೇಶಕ ರಾಜೀಂದರ್‌ ಕುಮಾರ್‌ ವಿರುದ್ಧ ಅಪಹರಣ ಮತ್ತು ಹತ್ಯೆ ಪ್ರಕರಣ ದಾಖಲಾಗಿತ್ತು. 2013ರ ಜುಲೈ 3ರಂದು ಸಿಬಿಐ ಈ ಪ್ರಕರಣದಲ್ಲಿ ಆರೋಪಪಟ್ಟಿ ದಾಖಲಿಸಿತ್ತು.

ವಿಶೇಷ ತನಿಖಾ ತಂಡವು 20 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಆದರೆ, ಸಿಬಿಐ ಈ ಸಂಖ್ಯೆಯನ್ನು ಏಳಕ್ಕೆ ಇಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.