ADVERTISEMENT

ಮತ್ತೊಂದು ಚಂದ್ರಯಾನ, ಹಲವು ಉಡ್ಡಯನ: ಇಸ್ರೊ ಪಾಲಿಗೆ ಬಿಡುವಿರದ ಕಾರ್ಯಭಾರ

ಪಿಟಿಐ
Published 16 ನವೆಂಬರ್ 2025, 15:27 IST
Last Updated 16 ನವೆಂಬರ್ 2025, 15:27 IST
ವಿ.ನಾರಾಯಣನ್
ವಿ.ನಾರಾಯಣನ್   

ಕೋಲ್ಕತ್ತ: ತಂತ್ರಜ್ಞಾನ ಅಭಿವೃದ್ಧಿ, ವಿವಿಧ ಉಪಗ್ರಹಗಳ ಉಡ್ಡಯನ ಜೊತೆಗೆ ಮಹತ್ವಾಕಾಂಕ್ಷೆಯ ಚಂದ್ರಯಾನ–4 ಕಾರ್ಯಕ್ರಮಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಜ್ಜಾಗುತ್ತಿದ್ದು, ಸಂಸ್ಥೆಯ ಕಾರ್ಯದ ಒತ್ತಡ ಮತ್ತಷ್ಟೂ ಹೆಚ್ಚಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಏಳು ಉಪಗ್ರಹಗಳ ಉಡ್ಡಯನಕ್ಕೆ ಸಿದ್ಧತೆ ನಡೆಯುತ್ತಿದೆ. 2027ಕ್ಕೆ ಮಾನವ ಸಹಿತ ಗಗನಯಾನವನ್ನು ಕಾರ್ಯಗತಗೊಳಿಸಬೇಕಿದೆ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಹೇಳಿದ್ದಾರೆ.

ಪಿಟಿಐಗೆ ಸಂದರ್ಶನ ನೀಡಿರುವ ಅವರು, ಸಂಸ್ಥೆಯ ಪ್ರಸಕ್ತ ಹಾಗೂ ಉದ್ದೇಶಿತ ಯೋಜನೆಗಳ ಕುರಿತು ವಿವರಿಸಿದ್ದಾರೆ.

ADVERTISEMENT

‘ಪ್ರಸಕ್ತ ಹಣಕಾಸು ವರ್ಷದೊಳಗಾಗಿ ಇನ್ನೂ 7 ಉಪಗ್ರಹಗಳನ್ನು ಉಡ್ಡಯನ ಮಾಡಲಾಗುವುದು. ವಾಣಿಜ್ಯ ಸಂವಹನ ಉಪಗ್ರಹವೂ ಸೇರಿದಂತೆ ಇತರ ವ್ಯೋಮಸಾಧನಗಳ ಉಡ್ಡಯನಕ್ಕೆ ಪಿಎಸ್ಎಲ್‌ವಿ ಹಾಗೂ ಜಿಎಸ್‌ಎಲ್‌ವಿ ರಾಕೆಟ್‌ಗಳನ್ನು ಅಣಿಗೊಳಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ಮೊದಲ ಬಾರಿಗೆ ಪಿಎಸ್‌ಎಲ್‌ವಿಯನ್ನು ದೇಶದ ಉದ್ದಿಮೆಗಳೇ ಸಂಪೂರ್ಣವಾಗಿ ನಿರ್ಮಿಸಿದ್ದು, ಇದರ ಉಡ್ಡಯನವು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲಾಗಲಿದೆ’ ಎಂದು ನಾರಾಯಣನ್‌ ಹೇಳಿದ್ದಾರೆ.

‘ಚಂದ್ರಯಾನ–4 ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದು ಭಾರತ ಕೈಗೊಳ್ಳಲಿರುವ ಅತ್ಯಂತ ಸಂಕೀರ್ಣ ಚಂದ್ರನ ಅನ್ವೇಷಣೆಯಾಗಿದೆ. ಸಂಶೋಧನೆಗಾಗಿ ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಭೂಮಿಗೆ ತರುವುದಕ್ಕೆ ಅನುವಾಗುವಂತೆ ಈ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ’ ಎಂದಿದ್ದಾರೆ.

2028ರ ವೇಳೆಗೆ ಚಂದ್ರಯಾನ–4 ಬಾಹ್ಯಾಕಾಶ ಕಾರ್ಯಕ್ರಮ ಕಾರ್ಯಗತಗೊಳಿಸುವ ಗುರಿ ಹೊಂದಲಾಗಿದೆ
ವಿ.ನಾರಾಯಣನ್ ಇಸ್ರೊ ಅಧ್ಯಕ್ಷ

ನಾರಾಯಣನ್‌ ಹೇಳಿದ್ದು..

* ತನ್ನ ಬೇಡಿಕೆಗೆ ಅನುಗುಣವಾಗಿ ಮುಂದಿನ ಮೂರು ವರ್ಷಗಳಲ್ಲಿ ಉಪಗ್ರಹಗಳ ತಯಾರಿಕೆಯನ್ನು ಮೂರುಪಟ್ಟು ಹೆಚ್ಚಿಸಲು ಇಸ್ರೊದಿಂದ ಕ್ರಮ

* ಜಪಾನ್‌ ಏರೋಸ್ಪೇಸ್‌ ಎಕ್ಸ್‌ಪ್ಲೋರೇಷನ್ ಏಜೆನ್ಸಿ ಸಹಯೋಗದಲ್ಲಿ ‘ಲುಪೆಕ್ಸ್’(ಚಂದ್ರನ ಧ್ರುವಗಳ ಅನ್ವೇಷಣೆ ಕಾರ್ಯಕ್ರಮ) ಅನುಷ್ಠಾನ. ಚಂದಿರನ ದಕ್ಷಿಣ ಧ್ರುವ ಕುರಿತು ಅಧ್ಯಯನ ಗುರಿ

* 2035ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ಸಾಣ ಸ್ಥಾಪಿಸುವುದಕ್ಕೆ ಸಂಬಂಧಿಸಿ ಕೆಲಸ ಆರಂಭ

* ಪ್ರಸ್ತುತ ಭಾರತದ ಬಾಹ್ಯಾಕಾಶ ಆರ್ಥಿಕತೆ ಗಾತ್ರ 8.2 ಶತಕೋಟಿ ಡಾಲರ್ (ಅಂದಾಜು ₹72 ಸಾವಿರ ಕೋಟಿ) ಇದೆ. 2033ರ ಹೊತ್ತಿಗೆ ಇದು 44 ಶತಕೋಟಿ (ಅಂದಾಜು ₹3 ಲಕ್ಷ ಕೋಟಿ) ತಲುಪಲಿದೆ ಎಂದು ಅಂದಾಜಿಸಲಾಗಿದೆ

* ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ 450 ಉದ್ದಿಮೆಗಳು ಹಾಗೂ 330 ಸಾರ್ಟ್ಅಪ್‌ಗಳು ಸಕ್ರಿಯವಾಗಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.