ADVERTISEMENT

ಮಾನವ ರಹಿತ ಮೊದಲ ಗಗನಯಾನಕ್ಕೆ ಸಿದ್ಧತೆ: ಇಸ್ರೊ ಅಧ್ಯಕ್ಷ ವಿ. ನಾರಾಯಣನ್‌

ಪಿಟಿಐ
Published 31 ಜನವರಿ 2026, 14:26 IST
Last Updated 31 ಜನವರಿ 2026, 14:26 IST
ವಿ. ನಾರಾಯಣನ್‌
ವಿ. ನಾರಾಯಣನ್‌   

ಚೆನ್ನೈ: ದೇಶದ ಮಹತ್ವಾಕಾಂಕ್ಷೆಯ ಮಾನವ ರಹಿತ ಮೊದಲ ಗಗನಯಾನಕ್ಕೆ ಸಿದ್ಧತೆ ಶುರುವಾಗಿದೆ ಎಂದು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ವಿ. ನಾರಾಯಣನ್‌ ಶುಕ್ರವಾರ ತಡರಾತ್ರಿ ಇಲ್ಲಿ ತಿಳಿಸಿದರು.

ಗಗನಯಾನ ಮಿಷನ್‌ ಪ್ರಸ್ತುತ ಅಭಿವೃದ್ಧಿಯಲ್ಲಿರುವ ಮಾನವ ಸಹಿತ ಮೊದಲ ಬಾಹ್ಯಾಕಾಶ ಕಾರ್ಯಕ್ರಮ. ಮೂವರ ತಂಡವನ್ನು ಮೂರು ದಿನ ಬಾಹ್ಯಾಕಾಶಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಟ್ಟು, ಅವರನ್ನು ಅಲ್ಲಿಂದ ವಾಪಸ್‌ ಕರೆಸಿಕೊಳ್ಳುವುದು ಇದರ ಉದ್ದೇಶವಾಗಿದೆ.

‘ಗಗನಯಾನವು 2027ಕ್ಕೆ ನಿಗದಿಯಾಗಿದೆ. ಅದಕ್ಕೂ ಮೊದಲು, ಮಾನವ ರಹಿತ ಮೂರು ಕಾರ್ಯಾಚರಣೆಗಳನ್ನು ಯೋಜಿಸಲಾಗಿದೆ. ನಾವು ಮೊದಲು ಮಾನವ ರಹಿತ ಕಾರ್ಯಾಚರಣೆಯತ್ತ ಕೆಲಸ ಮಾಡುತ್ತಿದ್ದೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಗಗನಯಾನದ ಯಶಸ್ಸಿಗಾಗಿ ವಿಜ್ಞಾನಿಗಳು ಹಲವು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ ಎಂದರು.

‘ಹಲವು ಪರೀಕ್ಷೆಗಳು ನಡೆಯುತ್ತಿವೆ. ಗಗನಯಾತ್ರಿಯ ಸುರಕ್ಷತೆ ಬಹಳ ಮುಖ್ಯ. ಆದ್ದರಿಂದ ನಾವು ಬಹಳ ಜಾಗರೂಕರಾಗಿರಬೇಕು. ಪ್ರತಿಯೊಂದು ವ್ಯವಸ್ಥೆಗೂ ನಾವು ಅರ್ಹತೆ ಪಡೆಯಬೇಕು. ರಾಕೆಟ್‌ ವ್ಯವಸ್ಥೆಯಲ್ಲಿ ಶೇಕಡ 100ರ ಸಾಧನೆ ಮಾಡಬೇಕು. ನಮ್ಮ ಗುರಿ (ಗಗನಯಾನದ ಯಶಸ್ಸು) ತಲುಪುವುದಕ್ಕಾಗಿ ನಾವು ಪರಿಪೂರ್ಣ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ’ ಎಂದು ಹೇಳಿದರು.

‘ಪಿಎಸ್‌ಎಲ್‌ವಿ–ಸಿ12 ಯೋಜನೆಯಡಿ ಜ.12ರಂದು ಉಡಾವಣೆಗೊಂಡ ರಾಕೆಟ್‌ ಮೂರನೇ ಹಂತದಲ್ಲಿ ವಿಫಲಗೊಂಡಿತು. ಇದರ ವೈಫಲ್ಯವನ್ನು ಪತ್ತೆಹಚ್ಚಲು ವಿಜ್ಞಾನಿಗಳು ಕ್ರಮಬದ್ಧ ಅಧ್ಯಯನ ನಡೆಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.