ADVERTISEMENT

ಚಂದ್ರಯಾನ–2 ಮತ್ತಷ್ಟು ಎತ್ತರಕ್ಕೆ

ಪಿಟಿಐ
Published 27 ಜುಲೈ 2019, 13:57 IST
Last Updated 27 ಜುಲೈ 2019, 13:57 IST
   

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಚಂದ್ರಯಾನ–2 ನೌಕೆಯ ಕ್ಷಕೆಯನ್ನು ಎರಡನೇ ಬಾರಿಗೆ ಎತ್ತರಿಸಿದೆ.

ಶುಕ್ರವಾರ ರಾತ್ರಿ 1.08ರಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ನೌಕೆಯಲ್ಲಿರುವ ಎಂಜಿನ್‌ ಅನ್ನು ಚಾಲೂ ಮಾಡಿ, ಈ ಕಾರ್ಯಾಚರಣೆ ನಡೆಸಲಾಗಿದೆ. 15 ನಿಮಿಷದ ಈ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ನೌಕೆಯು ಈಗ 251 ಕಿ.ಮೀ. (ಕನಿಷ್ಠ ಎತ್ತರ) X 54,829(ಗರಿಷ್ಠ ಎತ್ತರ) ಕಿ.ಮೀ. ಎತ್ತರದ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿದ್ದು, ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೊ ಮಾಹಿತಿ ನೀಡಿದೆ.

ಉಡ್ಡಯನದ ನಂತರ ಇದೇ ಬುಧವಾರ ಮೊದಲ ಬಾರಿಗೆ ನೌಕೆಯ ಕಕ್ಷೆಯನ್ನು ಎತ್ತರಿಸಲಾಗಿತ್ತು. ಶುಕ್ರವಾರ ಎರಡನೇ ಬಾರಿಗೆ ಕಕ್ಷೆಯನ್ನು ಎತ್ತರಿಸಲಾಗಿದೆ. ಜುಲೈ 29ರಂದು ಮೂರನೇ ಬಾರಿ ಕಕ್ಷೆಯನ್ನು ಎತ್ತರಿಸಲಾಗುತ್ತದೆ. ನಾಲ್ಕನೇ ಬಾರಿಯೂ ಕಕ್ಷೆಯನ್ನು ಎತ್ತರಿಸಲಾಗುತ್ತದೆ. ಆನಂತರ ಆಗಸ್ಟ್‌ 14ರಂದು ನೌಕೆಯು ಚಂದ್ರನತ್ತ ಪ್ರಯಾಣ ಆರಂಭಿಸಲಿದೆ.

ADVERTISEMENT

ನೌಕೆಯು ಚಂದ್ರನ ಅಂಗಳದಲ್ಲಿ ಇಳಿಯುವವರೆಗೆ ಇಂತಹ ಕಕ್ಷೆ ಬದಲಾವಣೆ ಕಾರ್ಯಾಚರಣೆಯನ್ನು 15 ಬಾರಿ ನಡೆಸಲಾಗುತ್ತದೆ.

ಆಗಸ್ಟ್‌ 22ರಂದು ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸಲಾಗುತ್ತದೆ. ನಂತರ ನೌಕೆಯು 13 ದಿನ ಚಂದ್ರನನ್ನು ಸುತ್ತು ಹಾಕಲಿದೆ. ಸೆಪ್ಟೆಂಬರ್ 7ರಂದು ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.