ADVERTISEMENT

ಭಾರತ ಕೆಲವೇ ತಿಂಗಳಲ್ಲಿ ಅಮೆರಿಕದ ಉಪಗ್ರಹ ಉಡಾವಣೆ ಮಾಡಲಿದೆ: ಇಸ್ರೊ ಅಧ್ಯಕ್ಷ

ನಾಸಾ ಅಭಿವೃದ್ಧಿಪಡಿಸಿದ 6,500 ಕೆ.ಜಿಯ ಸಂವಹನ ಉಪಗ್ರಹ

ಪಿಟಿಐ
Published 10 ಆಗಸ್ಟ್ 2025, 14:04 IST
Last Updated 10 ಆಗಸ್ಟ್ 2025, 14:04 IST
<div class="paragraphs"><p>‘ನಿಸಾರ್‌’ ಉಪಗ್ರಹ ಹೊತ್ತ ಜಿಎಸ್‌ಎಲ್‌ವಿ–ಎಫ್‌16 ರಾಕೆಟ್‌</p></div>

‘ನಿಸಾರ್‌’ ಉಪಗ್ರಹ ಹೊತ್ತ ಜಿಎಸ್‌ಎಲ್‌ವಿ–ಎಫ್‌16 ರಾಕೆಟ್‌

   

– ಪಿಟಿಐ ಚಿತ್ರ

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಸ್ಥೆಯು (ಇಸ್ರೊ), ಅಂದು ಅಮೆರಿಕ ನೀಡಿದ್ದ ಪುಟ್ಟ ರಾಕೆಟ್‌ನೊಂದಿಗೆ ಬಾಹ್ಯಾಕಾಶದಲ್ಲಿ ಯಶಸ್ವಿ ಆರಂಭದ ಹೆಜ್ಜೆ ಇಟ್ಟಿತ್ತು. ಇದೀಗ ಅಮೆರಿಕ ನಿರ್ಮಿಸಿರುವ 6,500 ಕೆ.ಜಿ. ತೂಕದ ಉಪಗ್ರಹವನ್ನು ಅದು ತನ್ನದೇ ಲಾಂಚರ್‌ನಲ್ಲಿ ಉಡಾವಣೆ ಮಾಡಲಿದೆ ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್‌ ಭಾನುವಾರ ಹೇಳಿದರು. 

ADVERTISEMENT

ಇಲ್ಲಿಗೆ ಸಮೀಪದ ಕಟ್ಟಂಕುಳತ್ತೂರ್‌ನಲ್ಲಿರುವ ಎಸ್‌ಆರ್‌ಎಂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ 21ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಾರಾಯಣನ್‌ ಭಾಗಿಯಾಗಿದ್ದರು. ಈ ವೇಳೆ ನೆರೆದಿದ್ದರವರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಇಸ್ರೊ ಹಾಗೂ ಅಮೆರಿಕದ ನಾಸಾದ ‘ಸಿಂಥೆಟಿಕ್‌ ಅಪಾರ್ಚರ್‌ ರೇಡಾರ್‌’ (ಎನ್‌ಐಎಸ್‌ಎಆರ್‌) ಎಂಬ ಜಂಟಿ ಕಾರ್ಯಕ್ರಮದಡಿ ಜುಲೈ 30ರಂದು  ಜಿಎಸ್‌ಎಲ್‌ವಿ–ಎಫ್‌16 ರಾಕೆಟ್‌ ಅನ್ನು ಉಡಾವಣೆ ಮಾಡಲಾಯಿತು. ಇನ್ನು ಕೆಲವೇ ತಿಂಗಳಲ್ಲಿ ಅಮೆರಿಕದ ಮತ್ತೊಂದು ರಾಕೆಟ್‌ ಅನ್ನು ಇಸ್ರೊ ಉಡಾವಣೆ ಮಾಡಲಿದೆ’ ಎಂದರು.

ಈ ವೇಳೆ ಇಸ್ರೊ ನಡೆದು ಬಂದ ಹಾದಿಯನ್ನು ಅವರು ಮೆಲುಕು ಹಾಕಿದರು. ‘1963ರಲ್ಲಿ ಇಸ್ರೊವನ್ನು ಸ್ಥಾಪಿಸಲಾಯಿತು. ಆಗ ಮುಂದುವರಿದ ರಾಷ್ಟ್ರಗಳಿಗಿಂತ ಭಾರತವು 6ರಿಂದ 7ವರ್ಷ ಹಿಂದೆ ಇತ್ತು. ಅದೇ ವರ್ಷ ಅಮೆರಿಕವು ಸಣ್ಣದೊಂದು ರಾಕೆಟ್‌ ಅನ್ನು ಭಾರತಕ್ಕೆ ನೀಡಿತು. ಇದರಿಂದ ನ.21 1963ರಲ್ಲಿ ಬಾಹ್ಯಾಕಾಶ ಕಾರ್ಯಕ್ರಮವನ್ನು ಆರಂಭಿಸಿದೆವು’ ಎಂದು ವಿವರಿಸಿದರು.   

‘ಇಂದು ಇಸ್ರೊ ಮತ್ತು ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ‘ನಿಸಾರ್‌’ ಉಪಗ್ರಹವನ್ನು ಉಡಾವಣೆ ಮಾಡಿದೆವು. ಇದು ವಿಶ್ವದಲ್ಲೇ ಈವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಉಪಗ್ರಹ. ಇದರಲ್ಲಿ ಅಳವಡಿಸಲಾದ ರೇಡಾರ್‌ಗಳಾದ ಎಲ್‌–ಬ್ಯಾಂಡ್‌ ಅನ್ನು ಅಮೆರಿಕ ಹಾಗೂ ಎಸ್‌–ಬ್ಯಾಂಡ್‌ ಅನ್ನು ಭಾರತ ವಿನ್ಯಾಸಗೊಳಿಸಿವೆ. ಭಾರತೀಯ ಲಾಂಚರ್‌ (ಜಿಎಸ್‌ಎಲ್‌ವಿ) ಮೂಲಕ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು. ನಾಸಾ ತಂಡವು ಇಸ್ರೊವನ್ನು ಶ್ಲಾಘಿಸಿತು. ಈಗ ನಾವು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ  ಮುಂದುವರಿದ ರಾಷ್ಟ್ರಗಳಿಗೆ ಸರಿಸಮನಾಗಿ ಕೆಲಸ ಮಾಡುತ್ತಿದ್ದೇವೆ. ಇದು ಎಂತಹ ಗಮನಾರ್ಹ ಬೆಳವಣಿಗೆಯಾಗಿದೆ’ ಎಂದು ಹೇಳಿದರು.

ವಿ. ನಾರಾಯಣನ್‌
50 ವರ್ಷಗಳ ಹಿಂದೆ ಭಾರತದಲ್ಲಿ ಉಪಗ್ರಹ ತಂತ್ರಜ್ಞಾನ ಇರಲಿಲ್ಲ. ಇದೀಗ 34 ದೇಶಗಳ ಒಟ್ಟು 433 ಉಪಗ್ರಹಳನ್ನು ತನ್ನದೇ ಲಾಂಚರ್‌ಗಳಿಂದ ಬಾಹ್ಯಾಕಾಶಕ್ಕೆ ಭಾರತ ಉಡಾವಣೆ ಮಾಡಿದೆ
ವಿ. ನಾರಾಯಣನ್‌ ಇಸ್ರೊ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.