ADVERTISEMENT

ಭಾರತದ ಸ್ವಾತಂತ್ರ್ಯ ಕುರಿತ ಭಾಗವತ್‌ ಹೇಳಿಕೆ ದೇಶದ್ರೋಹಕ್ಕೆ ಸಮ: ರಾಹುಲ್ ಗಾಂಧಿ

ಪಿಟಿಐ
Published 15 ಜನವರಿ 2025, 9:22 IST
Last Updated 15 ಜನವರಿ 2025, 9:22 IST
<div class="paragraphs"><p>ಮೋಹನ್ ಭಾಗವತ್ ಮತ್ತು ರಾಹುಲ್ ಗಾಂಧಿ</p></div>

ಮೋಹನ್ ಭಾಗವತ್ ಮತ್ತು ರಾಹುಲ್ ಗಾಂಧಿ

   

ನವದೆಹಲಿ: ‘ಭಾರತದ ಸ್ವಾತಂತ್ರ್ಯ ಕುರಿತ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ದೇಶದ್ರೋಹಕ್ಕೆ ಸಮವಾಗಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು.

ದೆಹಲಿಯಲ್ಲಿ ನಿರ್ಮಾಣವಾಗಿರುವ ನೂತನ ಕಾಂಗ್ರೆಸ್ ಪ್ರಧಾನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿರುವ ರಾಹುಲ್, ‘ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆಯಾದ ದಿನವೇ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂಬ ಮೋಹನ್ ಭಾಗವತ್ ಹೇಳಿಕೆ ಎಲ್ಲಾ ಭಾರತೀಯರಿಗೆ ಮಾಡಿದ ಅವಮಾನವಾಗಿದೆ’ ಎಂದು ಹೇಳಿದರು.

ADVERTISEMENT

‘ಸ್ವಾತಂತ್ರ್ಯ ಚಳವಳಿ ಮತ್ತು ಸಂವಿಧಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳುವ ದಿಟ್ಟತನವನ್ನು ಮೋಹನ್ ಭಾಗವತ್ ಪ್ರದರ್ಶಿಸಿದ್ದಾರೆ. ನಿನ್ನೆ ಅವರು ಏನು ಹೇಳಿದ್ದಾರೊ ಅದು ದೇಶದ್ರೋಹಕ್ಕೆ ಸಮವಾಗಿದೆ’ ಎಂದು ಹೇಳಿದರು.

‘ಬೇರೆ ದೇಶದಲ್ಲಾಗಿದ್ದರೆ ಸಾರ್ವಜನಿಕವಾಗಿ ಇಂತಹ ಹೇಳಿಕೆ ನೀಡುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದ್ದರು’ ಎಂದರು.

‘1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬ ಮಾತು ಪ್ರತಿ ಭಾರತೀಯರಿಗೆ ಮಾಡಿದ ಅವಮಾನವಾಗಿದೆ. ಅಜ್ಞಾನದಿಂದ ಕೂಡಿದ ಇಂತಹ ಹೇಳಿಕೆಗಳನ್ನು ಆಲಿಸದೇ ಇರುವುದು ಸೂಕ್ತ’ ಎಂದು ತಿಳಿಸಿದರು.

ಇದೇ ವೇಳೆ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿರುವ ರಾಹುಲ್, ‘ಮಹಾರಾಷ್ಟ್ರದಲ್ಲಿ ಮತದಾರರ ಸಂಖ್ಯೆಯಲ್ಲಿ ಏರಿಕೆಯಾಗಿರುವುದರ ಬಗ್ಗೆ ನಮಗೆ ಮಾಹಿತಿ ನೀಡಲು ಚುನಾವಣಾ ಆಯೋಗ ನಿರಾಕರಿಸಿತ್ತು’ ಎಂದು ಕಿಡಿಕಾರಿದರು.

‘ಯಾವ ಉದ್ದೇಶಕ್ಕಾಗಿ ಹೀಗೆ ಮಾಡಲಾಗುತ್ತಿದೆ? ಚುನಾವಣಾ ಆಯೋಗವನ್ನು ನಾಶ ಮಾಡುತ್ತಿರುವುದೇಕೆ? ಅವರು ನಮಗೆ ಮತದಾರರ ಪಟ್ಟಿಯನ್ನು ಕೊಡಲು ನಿರಾಕರಿಸುವುದೇಕೆ?’ ಎಂದು ಕೇಳಿದರು.

ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡುವುದು ಚುನಾವಣಾ ಆಯೋಗದ ಕರ್ತವ್ಯವಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.