ADVERTISEMENT

ಜಮ್ಮು: ಬಿಜೆಪಿ ರಾಜ್ಯ ಕಾರ್ಯದರ್ಶಿ ಹತ್ಯೆ, ರಾಜ್ಯ ಉದ್ವಿಗ್ನ ಸೇನೆಗೆ ಬುಲಾವ್

ಪಿಟಿಐ
Published 2 ನವೆಂಬರ್ 2018, 2:23 IST
Last Updated 2 ನವೆಂಬರ್ 2018, 2:23 IST
   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್ ಜಿಲ್ಲೆಯಲ್ಲಿ ಹಿರಿಯ ಬಿಜೆಪಿ ನಾಯಕ ಮತ್ತು ಅವರ ಸೋದರನನ್ನು ಉಗ್ರಗಾಮಿಗಳು ಗುರುವಾರ ರಾತ್ರಿ ಗುಂಡಿಟ್ಟು ಹತ್ಯೆಗೈದಿದ್ದಾರೆ. ಕೋಮು ಗಲಭೆ ಸಂಭವಿಸುವ ಅಪಾಯದ ಮುನ್ಸೂಚನೆ ಅರಿತ ಜಿಲ್ಲಾಡಳಿತ ಕರ್ಫ್ಯೂ ಜಾರಿ ಮಾಡಿದೆ. ಉದ್ವಿಗ್ನ ಜನರು ಪ್ರತಿಭಟನೆ ಮೆರವಣಿಗೆಗಳನ್ನು ನಡೆಸಲು ಮುಂದಾಗಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಕಾರಣಕಾರಣ ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆಯನ್ನು ಕರೆಸಲಾಯಿತು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಅನಿಲ್ ಪರಿಹಾರ್(52) ಮತ್ತ ಅವರ ಸೋದರ ಅಜಿತ್ (55) ಮೃತರು. ಅಣ್ಣತಮ್ಮಂದಿರು ತಮ್ಮ ಅಂಗಡಿಯಿಂದ ಮನೆಗೆ ಹಿಂದಿರುತ್ತಿದ್ದಾಗ ಅತ್ಯಂತ ಹತ್ತಿರದಿಂದ ಅವರ ಮೇಲೆಉಗ್ರರು ಗುಂಡು ಹಾರಿಸಿದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಗಾಯಾಳುಗಳು ಕೊನೆಯುಸಿರೆಳೆದರು.ಜಮ್ಮು ಪ್ರಾಂತ್ಯದಲ್ಲಿ ಈಚಿನ ದಿನಗಳಲ್ಲಿ ನಡೆದ ಮೊದಲ ರಾಜಕೀಯ ಹತ್ಯೆ ಇದು ಎಂದು ಪೊಲೀಸರು ಹೇಳಿದ್ದಾರೆ.

ದಾಳಿಯ ನಂತರ ಜನರು ಪರಿಹಾರ್ ಅವರ ಮನೆಯ ಎದುರು ಭಾರಿ ಸಂಖ್ಯೆಯಲ್ಲಿ ಜಮೆಯಾದರು. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನೆಯೊಳಗೆ ತೆರಳದಂತೆ ತಡೆಯೊಡ್ಡಿದ್ದರಲ್ಲದೆ, ಹಲ್ಲೆ ನಡೆಸಲು ಮುಂದಾದರು. ಮೃತದೇಹಗಳನ್ನು ಹಸ್ತಾಂತರಿಸಲು ನಿರಾಕರಿಸುವುದರ ಜೊತೆಗೆ ಸಾಕ್ಷ್ಯ ಸಂಗ್ರಹ ಮತ್ತು ತನಿಖಾ ಕಾರ್ಯಕ್ಕೂ ಅಡ್ಡಿಯುಂಟು ಮಾಡಿದರು.

ADVERTISEMENT

ಕಿಶ್ತ್‌ವಾರ್ ಜಿಲ್ಲಾಧಿಕಾರಿ ಎ.ಎಸ್.ರಾಣ ಸೇನೆಯನ್ನು ನಗರಕ್ಕೆ ಕರೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ನೆರವು ಕೋರಿದರು. ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಕೋಮು ಗಲಭೆಯ ಭೀತಿ ತಲೆದೋರಿದೆ. ಕರ್ಫ್ಯೂ ಹೇರಿರುವ ಪೊಲೀಸರು ನಾಲ್ವರಿಗಿಂತ ಹೆಚ್ಚು ಜನರು ಒಂದೆಡೆ ನಿಂತು ಮಾತನಾಡುವುದನ್ನು ನಿಷೇಧಿಸಿದ್ದಾರೆ.

ಕಿಶ್ತ್‌ವಾರ್‌ನಲ್ಲಿ ಈ ಹಿಂದೆ ಹಲವು ಬಾರಿಕೋಮು ಗಲಭೆಗಳು ನಡೆದಿದ್ದವು. ಹಿಂದೂಗಳನ್ನು ಕೊಲ್ಲುವ ಮೂಲಕ ಉಗ್ರರು ಕೋಮ ಗಲಭೆಗೆ ಪ್ರಚೋದಿಸಲು ಈ ಹಿಂದೆ ಯತ್ನಿಸುತ್ತಿದ್ದರು. ಆ.2013ರ ನಂತರ ಪಟ್ಟಣ ಶಾಂತವಾಗಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮೊದಲು ನಡೆದಿರುವ ಈ ಹತ್ಯೆಗಳು ಚುನಾವಣೆಯ ಮೇಲೆಯೂ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.

ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಸಿಪಿಎಂ ಮುಖಂಡ ಎಂ.ವೈ.ತರಿಗಾಮಿ ಸೇರಿದಂತೆ ಹಲವು ನಾಯಕರು ಹತ್ಯೆಯನ್ನು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.