ಪೂಂಛ್ ವಲಯದ ಗಡಿ ನಿಯಂತ್ರಣ ರೇಖೆ (ಸಾಂದರ್ಭಿಕ ಚಿತ್ರ)
ರಜೌರಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ತಾರ್ಕುಂಡಿ ವಲಯದ ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾದ ಪಾಕಿಸ್ತಾನದ ಪ್ರಜೆಯು ಭಯೋತ್ಪಾದಕರ ಮಾರ್ಗದರ್ಶಿ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಕೊಟ್ಲಿ ಜಿಲ್ಲೆಯ ನಿಕಿಯಾಲ್ ತೆಹ್ಸಿಲ್‌ನ ಡೆಟೋಟ್ ನಿವಾಸಿ ಮೊಹಮ್ಮದ್ ಆರಿಫ್ ಜೈಷ್–ಎ–ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ನಾಲ್ವರ ಗುಂಪನ್ನು ಮುನ್ನಡೆಸುತ್ತಿದ್ದ. ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಗಳಾದ ಪೂಂಛ್ ಹಾಗೂ ರಜೌರಿ ಬಳಿ ಭಾನುವಾರ ಮಧ್ಯಾಹ್ನ ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಆರಿಫ್‌ನನ್ನು ಭಾರತೀಯ ಸೇನೆ ಬಂಧಿಸಿತ್ತು. ಆತನೊಂದಿಗಿದ್ದ ಭಯೋತ್ಪಾದಕರು ಕಡಿದಾದ ಬಂಡೆಗಳನ್ನು ಜಿಗಿದು ಗಾಯಗಳೊಂದಿಗೆ ಪಾಕಿಸ್ತಾನದ ಕಡೆ ಓಡಿಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರಿಫ್ ಬಳಿ ಮೊಬೈಲ್ ಫೋನ್ ಹಾಗೂ ಪಾಕಿಸ್ತಾನದ ₹20 ಸಾವಿರ ಮೊತ್ತದ ಕರೆನ್ಸಿ ಇತ್ತು. ಆತನಿಗೆ ಪಾಕಿಸ್ತಾನ ಕಡೆಯ ಗಡಿ ನಿಯಂತ್ರಣ ರೇಖೆಯ ಭೌಗೋಳಿಕ ಪ್ರದೇಶದ ಬಗ್ಗೆ ಚೆನ್ನಾಗಿ ತಿಳಿದಿತ್ತು. ಪಾಕಿಸ್ತಾನದ ಸೇನೆಯ ಸೂಚನೆಯಂತೆ ಭಯೋತ್ಪಾದಕರು ಭಾರತದೊಳಗೆ ನುಸುಳಲು ಸಹಾಯ ಮಾಡುತ್ತಿರುವುದಾಗಿ ಆತ ತನಿಖೆ ವೇಳೆ ಹೇಳಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.