ADVERTISEMENT

ಒಡಿಶಾದ್ದೇ ಮೂಲ ಜಗನ್ನಾಥ ದೇಗುಲ: ಮೋದಿ ಮಧ್ಯಪ್ರವೇಶಕ್ಕೆ ಕಲಾವಿದ ಪಟ್ನಾಯಕ್ ಆಗ್ರಹ

ಪಿಟಿಐ
Published 6 ಮೇ 2025, 12:53 IST
Last Updated 6 ಮೇ 2025, 12:53 IST
<div class="paragraphs"><p>ಪಶ್ಚಿಮ ಬಂಗಾಳದ&nbsp;ಕರಾವಳಿ ಪ್ರದೇಶವಾದ ದಿಘಾದಲ್ಲಿ ನಿರ್ಮಾಣಗೊಂಡಿರುವ ಜಗನ್ನಾಥ ಧಾಮ</p></div>

ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶವಾದ ದಿಘಾದಲ್ಲಿ ನಿರ್ಮಾಣಗೊಂಡಿರುವ ಜಗನ್ನಾಥ ಧಾಮ

   

ಎಕ್ಸ್ ಚಿತ್ರ

ಭುವನೇಶ್ವರ: ಪಶ್ಚಿಮ ಬಂಗಾಳ ಸರ್ಕಾರವು ಕರಾವಳಿ ಪ್ರದೇಶವಾದ ದಿಘಾದಲ್ಲಿ ‘ಜಗನ್ನಾಥ ಧಾಮ’ವನ್ನು ಇತ್ತೀಚೆಗೆ ಉದ್ಘಾಟಿಸಿದೆ. ಆದರೆ ಪುರಿಯಲ್ಲಿರುವ ಜಗನ್ನಾಥ ದೇವಾಲಯವೇ ಮೂಲ ಧಾಮ ಎಂದು ಮರಳು ಶಿಲ್ಪ ಕಲಾವಿದ ಸುದರ್ಶನ ಪಟ್ನಾಯಕ್‌ ಹೇಳಿದ್ದು, ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.

ADVERTISEMENT

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿರುವ ಪಟ್ನಾಯಕ್ ಅವರು ಈ ಮೊದಲು 'ಶ್ರೀ ಜಗನ್ನಾಥ ದೇವಾಲಯ ನಿರ್ವಹಣಾ ಸಮಿತಿ' (SJTMC) ಸದಸ್ಯರಾಗಿದ್ದರು. ‘ಪಶ್ಚಿಮ ಬಂಗಾಳ ಸ್ಥಾಪಿಸಿರುವ ಜಗನ್ನಾಥ ಧಾಮವನ್ನು ಲಕ್ಷಾಂತರ ಭಕ್ತರು ಎಂದಿಗೂ ಮೂಲ ಧಾಮ ಎಂದು ಒಪ್ಪಿಕೊಳ್ಳುವುದಿಲ್ಲ’ ಎಂದಿದ್ದಾರೆ.

‘ಮಹಾಪ್ರಭು ಶ್ರೀ ಜಗನ್ನಾಥ ದೇವಾಲಯ ನಿರ್ಮಾಣ ಅತ್ಯಂತ ಶ್ರೇಷ್ಠವಾದ ಕಾರ್ಯವಾಗಿದೆ. ಆದರೆ ಇದುವೇ ‘ಜಗನ್ನಾಥ ಧಾಮ’ ಎಂದು ಕರೆದಿರುವುದು ಆಘಾತ ಮೂಡಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಈ ಘೋಷಣೆಯು ಜಗತ್ತಿನಲ್ಲಿರುವ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ’ ಎಂದು ಪ್ರಧಾನಿಗೆ ಪಟ್ನಾಯಕ್ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.

‘ಶಾಸ್ತ್ರಗಳ ಪ್ರಕಾರ ಪುರಿಯಲ್ಲಿರುವುದೇ ಮೂಲ ಜಗನ್ನಾಥ ದೇವಾಲಯ ಎಂದೆನ್ನಲಾಗಿದೆ. ಆದರೆ ಇಂಥದ್ದೇ ಇನ್ನೊಂದು ದೇವಾಲಯ ನಿರ್ಮಿಸುವುದರಿಂದ ಭಕ್ತರಲ್ಲಿ ಧಾರ್ಮಿಕ ಗೊಂದಲ ಮೂಡಿಸುತ್ತದೆ. ಇದರಿಂದ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿರುವ ಹಿಂದೂ ಧರ್ಮ ಮತ್ತು ಪರಂಪರೆ ಹಾಗೂ ಧಾರ್ಮಿಕ ಆಚರಣೆಯಲ್ಲಿ ಗೊಂದಲ ಉಂಟಾಗಲಿದೆ. ಹೀಗಾಗಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

ಇದಕ್ಕೂ ಮೊದಲು ಸುದರ್ಶನ ಪಟ್ನಾಯಕ್ ಅವರು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಜಿ ಅವರಿಗೆ ಪತ್ರ ಬರೆದು ಮಧ್ಯಪ್ರವೇಶಕ್ಕೆ ಕೋರಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ 'Boycott Puri' (ಪುರಿ ಭಹಿಷ್ಕರಿಸಿ) ಎಂಬ ಒಕ್ಕಣಿಕೆ ಹರಿದಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಇಲಾಖೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಪಾರ್ವತಿ ಪರಿದಾ, ‘ಇಂಥ ಅಭಿಯಾನಗಳು ಪುರಿಯ ಪ್ರವಾಸೋದ್ಯಮಕ್ಕೆ ತೊಡಕಾಗದು. ಪುರಿ ಕುರಿತು ಜಾಗತಿಕ ಮಟ್ಟದಲ್ಲಿರುವ ಪ್ರತಿಯೊಬ್ಬರಿಗೂ ತಿಳಿದಿದೆ. ಇಂಥ ನಕಾರಾತ್ಮಕ ಅಭಿಯಾನ ಸಫಲವಾಗದಂತೆ ಭಗವಾನ್ ಜಗನ್ನಾಥ ಅವರ ಆಶೀರ್ವಾದವಿದೆ’ ಎಂದಿದ್ದಾರೆ.

ಒಡಿಶಾದ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್‌ ಪ್ರತಿಕ್ರಿಯಿಸಿ, ‘ದಿಘಾದಲ್ಲಿ ಜಗನ್ನಾಥ ದೇವಾಲಯ ನಿರ್ಮಾಣವನ್ನು ಸ್ವಾಗತಿಸುತ್ತೇವೆ. ಆದರೆ ಅದನ್ನು ಜಗನ್ನಾಥ ಧಾಮ ಎಂದು ಕರೆಯುವುದಕ್ಕೆ ನಮ್ಮ ಆಕ್ಷೇಪವಿದೆ. ಒಂದೊಮ್ಮೆ ಪಶ್ಚಿಮ ಬಂಗಾಳ ತನ್ನ ಹೇಳಿಕೆ ಹಿಂಪಡೆಯದಿದ್ದರೆ, ಕಾನೂನು ಸಮರ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.