
ಸಿಯಾಟಲ್: 2023ರಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಪೊಲೀಸ್ ಅಧಿಕಾರಿ ಚಾಲನೆ ಮಾಡುತ್ತಿದ್ದ ವಾಹನ ಡಿಕ್ಕಿ ಹೊಡೆದ ಪರಿಣಾಮ 23 ವರ್ಷದ ಭಾರತ ಮೂಲದ ಪದವಿ ವಿದ್ಯಾರ್ಥಿನಿ ಮೃತಪಟ್ಟಿದ್ದರು. ಇದೀಗ, ಅವರ ಕುಟುಂಬಕ್ಕೆ ಸಿಯಾಟೆಲ್‌ನ ಸ್ಥಳೀಯಾಡಳಿತ 29 ಮಿಲಿಯನ್ ಡಾಲರ್ (ಸುಮಾರು ₹ 262 ಕೋಟಿ) ಪರಿಹಾರ ಘೋಷಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮಾದಕವಸ್ತು ಸಂಬಂಧಿತ ದೂರವಾಣಿ ಕರೆಗೆ ಪ್ರತಿಕ್ರಿಯಿಸುತ್ತಿದ್ದಾಗ 25 ಕಿ.ಮೀ ವೇಗದಲ್ಲಿ ಚಲಿಸಬೇಕಿದ್ದ ವಲಯದಲ್ಲಿ 74 ಕಿ.ಮೀ ವೇಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಅಧಿಕಾರಿ ಕೆವಿನ್ ಡೇವ್, ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರಿಗೆ ಡಿಕ್ಕಿ ಹೊಡೆದಿದ್ದರು.
‘ಜಾಹ್ನವಿ ಕಂದುಲಾ ಅವರ ಸಾವು ಹೃದಯವಿದ್ರಾವಕವಾಗಿತ್ತು. ಈ ಆರ್ಥಿಕ ಪರಿಹಾರವು ಕಂದುಲಾ ಕುಟುಂಬಕ್ಕೆ ಸ್ವಲ್ಪ ಮಟ್ಟಿಗೆ ಶಾಂತಿಯನ್ನು ತರುತ್ತದೆ ಎಂದು ಆಶಿಸುತ್ತೇವೆ’ಎಂಬುದಾಗಿ ಸಿಯಾಟೆಲ್ ನಗರದ ಸ್ಥಳೀಯಾಡಳಿತ ಹೇಳಿದೆ.
ಈ ಸಂಬಂಧ ವಕೀಲ ಎರಿಕಾ ಇವಾನ್ಸ್ ಬುಧವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಜಾಹ್ನವಿ ಕಂದುಲಾ ಅವರ ಜೀವ ಅತ್ಯಂತ ಮುಖ್ಯವಾಗಿತ್ತು. ಈ ಪರಿಹಾರವು ಅವರ ಕುಟುಂಬ, ಅವರ ಸ್ನೇಹಿತರು ಮತ್ತು ನಮ್ಮ ಸಮುದಾಯಕ್ಕೆ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಕಂದುಲಾ ಅವರು ಸಿಯಾಟಲ್ ನಾರ್ಥ್ ಈಸ್ಟರ್ನ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಮಾಹಿತಿ ವ್ಯವಸ್ಥೆಗಳ ಸಂಬಂಧಿತ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು.
ಕಳೆದ ಶುಕ್ರವಾರ ಕಿಂಗ್ ಕೌಂಟಿ ಸುಪೀರಿಯರ್ ಕೋರ್ಟ್‌ನಲ್ಲಿ ಕಕ್ಷಿದಾರರು ಪರಿಹಾರ ಇತ್ಯರ್ಥದ ನೋಟಿಸ್ ಸಲ್ಲಿಸಿದ್ದರು. ಸ್ಥಳೀಯ ಸುದ್ದಿ ತಾಣ ಪಬ್ಲಿಕೋಲಾ ಮೊದಲು ಈ ಬಗ್ಗೆ ವರದಿ ಮಾಡಿತ್ತು.
ಕಂದುಲಾ ಅವರ ಸಾವು ಆಕ್ರೋಶ ಮತ್ತು ಪ್ರತಿಭಟನೆಗಳನ್ನು ಹುಟ್ಟುಹಾಕಿತ್ತು. ಪ್ರಕರಣ ಕುರಿತಂತೆ ತನಿಖೆಗೂ ರಾಯಭಾರ ಕಚೇರಿ ಮನವಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.