ADVERTISEMENT

ಉತ್ತರ ಪ್ರದೇಶ ಪೊಲೀಸರ ವಶದಲ್ಲಿದ್ದ ಕೇರಳ ಪತ್ರಕರ್ತನಿಗೆ 5 ದಿನಗಳ ಜಾಮೀನು

ತಾಯಿ, ಸಂಬಂಧಿಗಳು ಮತ್ತು ವೈದ್ಯರನ್ನಷ್ಟೇ ಭೇಟಿಯಾಗಲಷ್ಟೇ ಅವಕಾಶ

ಏಜೆನ್ಸೀಸ್
Published 15 ಫೆಬ್ರುವರಿ 2021, 12:59 IST
Last Updated 15 ಫೆಬ್ರುವರಿ 2021, 12:59 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಹತ್ರಾಸ್‌ಗೆ ತೆರಳುತ್ತಿದ್ದಾಗ ಬಂಧಿಸಲ್ಪಟ್ಟಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕ್‌ ಕಪ್ಪನ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

ಕೇರಳದಲ್ಲಿರುವ ಅನಾರೋಗ್ಯ ಪೀಡಿತ ತಾಯಿಯನ್ನು ಭೇಟಿಯಾಗಲು ಕಪ್ಪನ್‌ ಅವರಿಗೆ ಐದು ದಿನಗಳ ಅವಕಾಶ ನೀಡಿ ಸುಪ್ರೀಂ ಕೋರ್ಟ್‌ ಸೋಮವಾರ ಆದೇಶ ಹೊರಡಿಸಿದೆ.

ತಮ್ಮ ತಾಯಿ, ಸಂಬಂಧಿಗಳು ಮತ್ತು ವೈದ್ಯರನ್ನಷ್ಟೇ ಭೇಟಿಯಾಗಲು ಕಪ್ಪನ್‌ ಅವರಿಗೆ ಅನುಮತಿ ನೀಡಲಾಗಿದೆ. ಸಾರ್ವಜನಿಕರು, ಸಾಮಾಜಿಕ ಮಾಧ್ಯಮಗಳು ಹಾಗೂ ಮಾಧ್ಯಮಗಳಿಗೆ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಲು ಅವರಿಗೆ ಅವಕಾಶವನ್ನು ನಿರಾಕರಿಸಲಾಗಿದೆ.

ADVERTISEMENT

ಉತ್ತರ ಪ್ರದೇಶ ಪೊಲೀಸರ ಬೆಂಗಾವಲಿನಲ್ಲಿ ಕಪ್ಪನ್‌ ಅವರು ಕೇರಳಕ್ಕೆ ತೆರಳಬೇಕು ಮತ್ತು ಕೇರಳ ಪೊಲೀಸರು, ಉತ್ತರ ಪ್ರದೇಶ ಪೊಲೀಸರಿಗೆ ಸಹಕರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಸಾವಿನ ಪ್ರಕರಣದ ನಂತರ ಹಾಥರಸ್‌ ಪರಿಸ್ಥಿತಿ ಕುರಿತು ವರದಿ ಮಾಡುವುದಕ್ಕಾಗಿ ಸಿದ್ದಿಕಿ ಕಪ್ಪನ್‌ ತೆರಳುತ್ತಿದ್ದರು. ಆ ವೇಳೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಅವರನ್ನು ಬಂಧಿಸಿದ್ದರು.

ಕಪ್ಪನ್‌ ಅವರಿಗೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಜೊತೆ ಸಂಪರ್ಕವಿದೆ ಎನ್ನುವ ಆರೋಪದಡಿ ಯುಎಪಿಎಯಡಿ ಕಠಿಣ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು.

ಅಕ್ಟೋಬರ್‌ 5ರಿಂದ ಬಂಧನದಲ್ಲಿರುವ ಪತ್ರಕರ್ತ ಸಿದ್ದಿಕಿ ಕಪ್ಪನ್‌ ಅವರಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಹಿರಿಯ ವಕೀಲ ಕಪಿಲ್‌ ಸಿಬಲ್‌ ಕೋರ್ಟ್‌ಗೆ ಮನವಿ ಮಾಡಿದ್ದರು. 'ಕಕ್ಷಿದಾರರ ವಿರುದ್ಧ ಯಾವುದೇ ಆರೋಪಗಳಿಲ್ಲ. ಎಫ್‌ಐಆರ್‌ನಲ್ಲಿಯೂ ಅವರನ್ನು ಹೆಸರಿಸಿಲ್ಲ. ಅವರನ್ನು ಅಕ್ಟೋಬರ್‌ 5ರಿಂದ ಬಂಧನದಲ್ಲಿಡಲಾಗಿದೆ' ಎಂದು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.