ADVERTISEMENT

ಜೈಪುರ ಸಮ್ಮೇಳನ: ಬಹುಮುಖಿ ಸಾಹಿತ್ಯಜಾತ್ರೆ ಇಂದು ಆರಂಭ

ಜೈಪುರ ಸಮ್ಮೇಳನ: ಕನ್ನಡ ಸೇರಿದಂತೆ 16 ಭಾರತೀಯ ಭಾಷೆಗಳಿಗೆ ಪ್ರಾತಿನಿಧ್ಯ

ಕೋಡಿಬೆಟ್ಟು ರಾಜಲಕ್ಷ್ಮಿ
Published 31 ಜನವರಿ 2024, 16:11 IST
Last Updated 31 ಜನವರಿ 2024, 16:11 IST
<div class="paragraphs"><p>ಜೈಪುರ ಸಾಹಿತ್ಯ ಉತ್ಸವ </p></div>

ಜೈಪುರ ಸಾಹಿತ್ಯ ಉತ್ಸವ

   

-ಸಾಂದರ್ಭಿಕ ಚಿತ್ರ

ಜೈಪುರ:  ’ಕಥೆಗಳು ನಮ್ಮನ್ನು ಬೆಸೆಯುತ್ತವೆ’ ಎಂಬ ಆಶಯವನ್ನು ಹೊತ್ತ ಐದು ದಿನಗಳ ಬೃಹತ್‌ ಸಾಹಿತ್ಯ ಜಾತ್ರೆ, 'ಜೈಪುರ ಲಿಟರೇಚರ್‌ ಫೆಸ್ಟಿವಲ್‌' ಅನ್ನು ಗುರುವಾರ ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ ಉದ್ಘಾಟಿಸುವರು.

ADVERTISEMENT

ನಗರದ ಹೋಟೆಲ್ ಕ್ಲಾರ್ಕ್ಸ್‌ ಅಮರ್‌ನಲ್ಲಿ ನಡೆಯುವ ಈ ಸಾಹಿತ್ಯ–ಸಾಂಸ್ಕೃತಿಕ ಉತ್ಸವದಲ್ಲಿ ದೇಶ ವಿದೇಶಗಳ 550ಕ್ಕೂ ಹೆಚ್ಚು ಮಂದಿ ಸಾಧಕರು ಮಾತನಾಡಲಿದ್ದು,ಕಲೆ, ಸಾಹಿತ್ಯ ಮತ್ತು ಸಾಮಾಜಿಕ ವಿಷಯಗಳ ವಿವಿಧ ಆಯಾಮಗಳ ಕುರಿತು ಚರ್ಚಿಸಲಿದ್ದಾರೆ.  

ಕಾವ್ಯದ ಹೃದಯಬಡಿತವನ್ನು ಪ್ರಸಿದ್ಧ ಚಿತ್ರ ಸಾಹಿತಿ ಗುಲ್ಜಾರ್‌ ಅವರು ವಿವರಿಸಲಿದ್ದರೆ, ಎ.ಕೆ. ರಾಮಾನುಜನ್‌ ಅವರ ಅಪ್ರಕಟಿತ  ಕವಿತೆಗಳ ಸಂಪಾದಿತ ಕೃತಿ ‘ಸೋಮ’ ದ ಕುರಿತು ನಡೆಯುವ ಗೋಷ್ಠಿಯಲ್ಲಿ ಸಂಪಾದಕರಾದ ಗಿಲೆರ್ಮೋ ರೋಡ್ರಿಗಸ್‌ ಮತ್ತು ಕೃಷ್ಣ ರಾಮಾನುಜನ್‌ ಸಂವಾದ ನಡೆಸಲಿದ್ದಾರೆ. ಬೂಕರ್‌ ಪ್ರಶಸ್ತಿ ವಿಜೇತ ಐರಿಷ್‌ ಕಾದಂಬರಿಕಾರ ಪೌಲ್‌ ಲಿಂಚ್‌  ತಮ್ಮ ‘ಪ್ರೊಫೆಟ್‌ ಸಾಂಗ್’ ಕೃತಿಯ ಕುರಿತು ಅನಿಸಿಕೆ ಹಂಚಿಕೊಳ್ಳುವರು.

ಭಾರತೀಯ ರಿಸರ್ವ್‌ಬ್ಯಾಂಕ್‌ ಗವರ್ನರ್‌ ರಘುರಾಮ್‌ ರಾಜನ್‌ ಅವರಿಂದ ‘ಅರ್ಥಶಾಸ್ತ್ರ ಭವಿಷ್ಯದ ಮರುಕಲ್ಪನೆ’ಯ ಕುರಿತು ಅನಿಸಿಕೆ ಮಂಡನೆ, ‘ಓಪನ್‌ ಹೈಮರ್‌’ ಸಿನಿಮಾಕ್ಕೆ ಪ್ರೇರಣೆಯಾದ ಅಮೆರಿಕನ್‌ ಪ್ರೊಮೆಥ್ಯೂಸ್‌ ಕೃತಿಯ ಸಹಲೇಖಕ ಕೈಬರ್ಡ್‌ ಅವರೊಡನೆ ನಡೆಯುವ ಮಾತುಕತೆಯ ಬಗ್ಗೆ ನಿರೀಕ್ಷೆ–ಕುತೂಹಲ ಹೆಚ್ಚಿದೆ. ವಿವೇಕ್‌ಶಾನಭಾಗ್‌, ಸುಧಾಮೂರ್ತಿ, ದೇವದತ್ತ ಪಟ್ಟನಾಯಿಕ್‌, ಶಶಿ ತರೂರ್‌, ಚಿತ್ರಾ ಬ್ಯಾನರ್ಜಿ ದಿವಾಕರುಣಿ, ಕ್ರಿಕೆಟಿಗ ಅಜಯ್‌ ಜಡೇಜ, ವೆಂಕಟ ಸುಂದರಂ ಸೇರಿದಂತೆ ಅನೇಕ ಸಾಧಕರು ಈ ಫೆಸ್ಟಿವಲ್‌ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. 

ಕನ್ನಡ, ಮಲಯಾಳಂ, ಅಸ್ಸಾಮಿ, ಹಿಂದಿ, ಕಾಶ್ಮೀರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ಉರ್ದು ಸೇರಿದಂತೆ 16 ಭಾರತೀಯ ಭಾಷೆಗಳು ಮತ್ತು ಎಂಟು ಅಂತರರಾಷ್ಟ್ರೀಯ ಭಾಷೆಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರಗಳು ಚರ್ಚೆಗೆ ವಸ್ತುವಾಗಿವೆ.  ಈ ವರ್ಷದ ಮಹಾಕವಿ ಕನ್ನಯ್ಯಲಾಲ್‌ ಸೇಥಿಯಾ ಕಾವ್ಯ ಪ್ರಶಸ್ತಿಯು ‌ಪ್ರಸಿದ್ಧ ಕವಯಿತ್ರಿ ಮುಂಬೈ ಮೂಲದ ಅರುಂಧತಿ ಸುಬ್ರಹ್ಮಣ್ಯಂ ಅವರಿಗೆ ನೀಡಲು ನಿರ್ಧರಿಸಲಾಗಿದ್ದು ಜ.4ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಕೃತಕ ಬುದ್ಧಿಮತ್ತೆ, ಜಾಗತಿಕ ತಾಪಮಾನ, ಕ್ರಿಕೆಟ್‌, ರಾಜಕೀಯ ಮುಂತಾಗಿ ವೈವಿಧ್ಯಮಯ ಕ್ಷೇತ್ರಗಳ ಪ್ರಮುಖ ಅಂಶಗಳಿಗೆ ಸಂಬಂಧಿಸಿದ ಚರ್ಚೆಗೆ ವೇದಿಕೆ ಕಲ್ಪಿಸಲಾಗಿದ್ದು ಡಿಜಿಟಲ್‌ ಕಾಲಮಾನದ ಜೀವನವಿಧಾನದೊಡನೆ ಸಾಹಿತ್ಯ ಮತ್ತು ಕಲೆಯು ಮಿಳಿತವಾಗುವ ಹೊಸಪರಿಯ ವಿಶ್ಲೇಷಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.