ADVERTISEMENT

ಪಾಕ್‌ ಜೆಎಎಂ ಕಮಾಂಡರ್ ಸೇರಿ ಇಬ್ಬರು ಉಗ್ರರ ಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 19:36 IST
Last Updated 27 ಜುಲೈ 2019, 19:36 IST
ಭಾರತೀಯ ಸೇನಾ ಯೋಧರು– ಸಾಂದರ್ಭಿಕ ಚಿತ್ರ
ಭಾರತೀಯ ಸೇನಾ ಯೋಧರು– ಸಾಂದರ್ಭಿಕ ಚಿತ್ರ   

ಶ್ರೀನಗರ: ಪರಿಣಾಮಕಾರಿ ಸ್ಫೋಟಕಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತನಾಗಿದ್ದ, ಪಾಕಿಸ್ತಾನದ ಜೈಷ್‌ ಎ ಮೊಹಮ್ಮದ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್ ಸೇರಿದಂತೆ ಇಬ್ಬರು ಉಗ್ರರು ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಶನಿವಾರ ಗುಂಡಿನ ಚಕಮಕಿ ನಡೆಯಿತು. ಮೃತರ ಪೈಕಿ ಒಬ್ಬನನ್ನು ಪಾಕಿಸ್ತಾನಿ ಪ್ರಜೆ ಮುನ್ನಾ ಲಹೊರಿ ಎಂದು ಗುರುತಿಸಿದ್ದು, ಕಾಶ್ಮೀರದಲ್ಲಿ ನಡೆದ ಸರಣಿ ನಾಗರಿಕರ ಹತ್ಯೆ ಪ್ರಕರಣಗಳಿಗೆ ಕಾರಣನಾಗಿದ್ದ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಬ್ಬ ಉಗ್ರನನ್ನು ಹಿಜಬುಲ್‌ ಮುಜಾಹಿದ್ದೀನ್‌ನ ಘಟಕ ಟುರ್ಕವಂಗೊಮ್‌ ಶೋಪಿಯನ್‌ನ ಸದಸ್ಯನಾಗಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ADVERTISEMENT

ದಕ್ಷಿಣ ಕಾಶ್ಮೀರದಲ್ಲಿ ಶನಿವಾರ ಬೆಳಿಗ್ಗೆ ಉಗ್ರರು ನೆಲೆಸಿರುವ ಖಚಿತ ಮಾಹಿತಿಯನ್ನು ಆಧರಿಸಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಸೇನೆಯ 23 ಪ್ಯಾರಾ ಮತ್ತು ವಿಶೇಷ ಕಾರ್ಯಾಚರಣೆ ಪಡೆಯು ಇಲ್ಲಿಗೆ 55 ಕಿ.ಮೀ ದೂರದ ಶೋಪಿಯಾನ್‌ನ ಬೋನ್‌ಬಜಾರ್‌ನಲ್ಲಿ ಕಾರ್ಯಾಚರಣೆ ನಡೆಸಿತು.

ಈತ ಮಾರ್ಚ್‌ 30ರಂದು ಬಿನಿಹಾಲ್‌ನಲ್ಲಿ ಹಾಗೂ ಜೂನ್‌ 17 ರಂದು ಪುಲ್ವಾಮಾದಲ್ಲಿ ಭದ್ರತಾ ಪಡೆಗಳಿದ್ದ ವಾಹನಕ್ಕೆ ಕಾರು ಗುದ್ದಿಸಿ ಯೋಧರನ್ನು ಬಲಿಪಡೆದಿದ್ದ ಸ್ಫೋಟ ಕೃತ್ಯಗಳಿಗೆ ಕಾರಣನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.