ADVERTISEMENT

ಕೊರೊನೋತ್ತರ ಆರ್ಥಿಕ ಸುಧಾರಣೆ: ಯುರೋಪ್ ಒಕ್ಕೂಟದ ಜತೆ ಎಸ್.ಜೈಶಂಕರ್ ಮಾತುಕತೆ

ಪಿಟಿಐ
Published 29 ಮೇ 2020, 1:35 IST
Last Updated 29 ಮೇ 2020, 1:35 IST
ವಿದೇಶಾಂಗ ಸಚಿವ ಎಸ್.ಜೈಶಂಕರ್
ವಿದೇಶಾಂಗ ಸಚಿವ ಎಸ್.ಜೈಶಂಕರ್   

ನವದೆಹಲಿ: ಕೊರೊನೋತ್ತರ ಆರ್ಥಿಕ ಸುಧಾರಣೆ ಮತ್ತು ಯುರೋಪಿಯನ್ ಯೂನಿಯನ್–ಭಾರತದ 15ನೇ ಶೃಂಗಸಭೆ ತಯಾರಿ ಹಿನ್ನೆಲೆಯಲ್ಲಿ ಯುರೋಪ್ ಒಕ್ಕೂಟದ ವಿದೇಶಾಂಗ ನೀತಿ ವಿಭಾಗದ ಮುಖ್ಯಸ್ಥ ಜೋಸೆಫ್ ಬೊರೆಲ್ ಜತೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾತುಕತೆ ನಡೆಸಿದ್ದಾರೆ.

ಕೊರೊನೋತ್ತರ ಆರ್ಥಿಕ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ತಂತ್ರಜ್ಞಾನ, ಸಂಪರ್ಕ ಮತ್ತು ಭದ್ರತಾ ಕ್ಷೇತ್ರಗಳಿಗೆ ಸಂಬಂಧಿಸಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾಗಿ ಜೈಶಂಕರ್ ತಿಳಿಸಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟವು ಮಾತುಕತೆಯ ಮುಖ್ಯ ಅಂಶವಾಗಿತ್ತು. ಜತೆಗೆ ಯುರೋಪಿಯನ್ ಯೂನಿಯನ್–ಭಾರತದ 15ನೇ ಶೃಂಗಸಭೆ ತಯಾರಿ ಬಗ್ಗೆಯೂ ಮಾತುಕತೆ ನಡೆಸಲಾಯಿತು ಎಂದು ಯುರೋಪ್ ಒಕ್ಕೂಟದ ಪ್ರಕಟಣೆ ತಿಳಿಸಿದೆ. ಮಾರ್ಚ್‌ನಲ್ಲಿ ನಡೆಯಬೇಕಿದ್ದ ಈ ಶೃಂಗಸಭೆ ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿತ್ತು.

ಕೊರೊನಾ ವೈರಸ್ ಸಾಂಕ್ರಾಮಿಕ ಸಮಸ್ಯೆಯಿಂದ ಹೊರಬರಲು ಮತ್ತು ಜಾಗತಿಕ ಸಾಮಾಜಿಕ–ಆರ್ಥಿಕ ಸುಧಾರಣೆ ನಿಟ್ಟಿನಲ್ಲಿ ಒಗ್ಗೂಡಿ ಕೆಲಸ ಮಾಡಲು ಭಾರತ ಮತ್ತು ಯುರೋಪ್ ಒಕ್ಕೂಟ ಸಮ್ಮತಿಸಿವೆ ಎಂದೂ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.