ADVERTISEMENT

ಅಮರನಾಥ ಯಾತ್ರೆ | ಪ್ರತಿಕೂಲ ಹವಾಮಾನದಿಂದಾಗಿ ಎರಡನೇ ದಿನವೂ ಯಾತ್ರೆ ಸ್ಥಗಿತ

ಪಿಟಿಐ
Published 8 ಜುಲೈ 2023, 5:39 IST
Last Updated 8 ಜುಲೈ 2023, 5:39 IST
ಅಮರನಾಥ ಯಾತ್ರೆ– ಪ್ರಾತಿನಿಧಿಕ ಚಿತ್ರ
ಅಮರನಾಥ ಯಾತ್ರೆ– ಪ್ರಾತಿನಿಧಿಕ ಚಿತ್ರ   

ಜಮ್ಮು: ಜಮ್ಮು ಮತ್ತು ಕಾಶ್ಮೀರದಾದ್ಯಂತ ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆ ಎರಡನೇ ದಿನವು ಸ್ಥಗಿತಗೊಂಡಿದೆ. ಯಾತ್ರಾರ್ಥಿಗಳು ಇಲ್ಲಿನ ಭಗವತಿ ನಗರದ ಮೂಲ ಶಿಬಿರದಲ್ಲಿ ಉಳಿದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಂಬನ್‌ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯಿಂದಾಗಿ ಮಣ್ಣು ಕುಸಿತಗೊಂಡಿದ್ದು, ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಪ್ರತಿಕೂಲ ಹವಾಮಾನದಿಂದಾಗಿ ಕಣಿವೆಯಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿರುವುದರಿಂದ ಇಂದು ಬೆಳಿಗ್ಗೆ ಭಗವತಿ ನಗರ ಮೂಲ ಶಿಬಿರದಿಂದ ಯಾವುದೇ ಹೊಸ ಬ್ಯಾಚ್‌ನ ಯಾತ್ರಿಕರಿಗೂ ಯಾತ್ರೆಗೆ ಅವಕಾಶ ನೀಡಲಾಗಿಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಎಲ್ಲಾ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಮತ್ತು ಮಾರ್ಗದುದ್ದಕ್ಕೂ ಇರುವ ನಿಲುಗಡೆ ನಿಲ್ದಾಣಗಳಲ್ಲಿ ಆಶ್ರಯ ಪಡೆದಿದ್ದಾರೆ, ಹವಾಮಾನ ಸುಧಾರಿಸಿದ ನಂತರ ಯಾತ್ರೆಯನ್ನು ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾನುವಾರದವರೆಗೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಮರನಾಥ ಗುಹೆಯಲ್ಲಿ ಸ್ವಾಭಾವಿಕವಾಗಿ ಮೂಡುವ ಹಿಮದ ಶಿವಲಿಂಗ ದರ್ಶನದ ವಾರ್ಷಿಕ ಯಾತ್ರೆಯು ಜುಲೈ 1ರಿಂದ ಆರಂಭವಾಗಿದ್ದು, ಆಗಸ್ಟ್‌ 31ರವರೆಗೆ ನಡೆಯಲಿದೆ. ಈವರೆಗೆ 84,768 ಯಾತ್ರಾರ್ಥಿಗಳು ದರ್ಶನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.