ADVERTISEMENT

ಸರ್ಕಾರಿ ನೌಕರರು ಸರ್ಕಾರವನ್ನು ಟೀಕಿಸುವಂತಿಲ್ಲ: ಜಮ್ಮು– ಕಾಶ್ಮೀರದಲ್ಲಿ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 16:20 IST
Last Updated 25 ಮಾರ್ಚ್ 2023, 16:20 IST
   
ಶ್ರೀನಗರ: ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸಾರ್ವಜನಿಕವಾಗಿ ಸರ್ಕಾರ ಮತ್ತು ಅದರ ನೀತಿಗಳು, ಕ್ರಮಗಳನ್ನು ಸರ್ಕಾರಿ ನೌಕರರು ಟೀಕಿಸದಂತೆ ನಿಷೇಧಿಸಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸುತ್ತೋಲೆ ಹೊರಡಿಸಿದೆ.
‘ರಾಜಕೀಯ, ಜಾತ್ಯತೀತ ವಿರೋಧಿ ಮತ್ತು ಕೋಮುಭಾವನೆ ಹೊಂದಿರುವ ವಿಷಯಗಳನ್ನು ಪೋಸ್ಟ್‌ ಮತ್ತು ಶೇರ್‌ ಮಾಡಬಾರದು. ಈ ರೀತಿಯ ವಿಷಯಗಳನ್ನು ಪ್ರಚುರಪಡಿಸುವ ಜಾಲತಾಣಗಳ ಪೇಜ್‌ಗಳು, ಟ್ವಿಟರ್‌ ಖಾತೆಗಳು ಮತ್ತು ಬ್ಲಾಗ್‌ಗಳನ್ನು ಸಬ್‌ಸ್ಕ್ರೈಬ್‌ ಮಾಡಬಾರದು. ಈ ಮಾರ್ಗಸೂಚಿಗಳ ಅಥವಾ ನಿಯಮಗಳ ಉಲ್ಲಂಘನೆಯನ್ನು ದುರ್ವರ್ತನೆ ಎಂದು ಪರಿಗಣಿಸಲಾಗುವುದು. ಅಂತಹ ವರ್ತನೆ ತೋರಿದ ನೌಕರರ ವಿರುದ್ಧ ಸಂಬಂಧಪಟ್ಟ ಕಾನೂನಿನಡಿ ಕ್ರಮ ಜರುಗಿಸಲಾಗುವುದು’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಈ ಸುತ್ತೋಲೆಯನ್ನು ಸರ್ಕಾರದ ಕಾರ್ಯದರ್ಶಿ ಸಂಜೀವ್‌ ವರ್ಮ ಅವರು ಬಿಡುಗಡೆ ಮಾಡಿದರು.
ಈ ಸುತ್ತೋಲೆಯನ್ನು ವಿರೋಧಿಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು, ‘ಇದು ಸಾರ್ವಜನಿಕರ ಮೂಲಭೂತ ಹಕ್ಕುಗಳ ಸಂಪೂರ್ಣ ಉಲ್ಲಂಘನೆ’ ಎಂದು ಹೇಳಿದ್ದಾರೆ.
ಮುಫ್ತಿ ಅವರು 2017ರಲ್ಲಿ ಸರ್ಕಾರಿ ನೌಕರರು ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಕುರಿತು ಮಾರ್ಗಸೂಚಿ ಹೊರಡಿಸಿದ್ದರು. ಆ ಮಾರ್ಗಸೂಚಿಯ ಕೆಲವು ನಿಯಮಗಳನ್ನೂ ಈ ಸುತ್ತೋಲೆಯಲ್ಲಿ ಪುನರಾವರ್ತನೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.