ಸತ್ಯಪಾಲ್ ಮಲಿಕ್
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಕಳೆದ ಹಲವು ದಿನಗಳಿಂದ ಸತ್ಯಪಾಲ್ ಮಲಿಕ್ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ದೆಹಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ 1.12ಕ್ಕೆ ನಿಧನರಾದರು ಎಂದು ಅವರ ಆಪ್ತ ಸಹಾಯಕರು ತಿಳಿಸಿದ್ದಾರೆ.
ಉತ್ತರಪ್ರದೇಶದ ಹಿಸ್ಸಾವಾಡದಲ್ಲಿ (ಇಂದಿನ ಭಾಗಪತ್ ಜಿಲ್ಲೆಯ ಗ್ರಾಮ) 1946 ರಲ್ಲಿ ಜಾಟ್ ಸಮುದಾಯದ ಕೃಷಿಕ ಕುಟುಂಬದಲ್ಲಿ ಜನಿಸಿದ್ದ ಸತ್ಯಪಾಲ್ ಮಲಿಕ್ ವಕೀಲರಾಗಿ ವೃತ್ತಿ ಪ್ರಾರಂಭಿಸಿ ನಂತರ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ‘ಭಾರತೀಯ ಕ್ರಾಂತಿ ದಳ’ದ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದ್ದರು.
ಕ್ರಾಂತಿ ದಳದ ನಂತರ ಮಲಿಕ್ ಅವರು ಕಾಂಗ್ರೆಸ್, ಲೋಕ ದಳ, ಸಮಾಜವಾದಿ ಪಕ್ಷ, ಜನತಾದಳದಲ್ಲಿಯೂ ರಾಜಕೀಯ ಜೀವನ ಕಂಡುಕೊಂಡಿದ್ದರು. 2000 ಸವಿಯ ನಂತರ ವಾಜಪೇಯಿ ಅವರ ಜೊತೆ ಗುರುತಿಸಿಕೊಂಡು ಬಿಜೆಪಿ ಸೇರಿದ್ದರು. 2012ರಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು.
ಮಲಿಕ್ ಅವರು 1980–89 ರವರೆಗೆ ಎರಡು ಬಾರಿ ರಾಜ್ಯಸಭಾ ಸದಸ್ಯ ಹಾಗೂ 1989–91ರರೆಗೆ ಜನತಾದಳದಿಂದ ಅಲಿಘಢ ಲೋಕಸಭಾ ಕ್ಷೇತ್ರದ ಸಂಸದರಾಗಿ ಕಾರ್ಯನಿರ್ವಹಿಸಿದ್ದರು.
ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯಕ್ಕೆ ಮನ್ನಣೆ ನೀಡಬೇಕೆಂದು 2018 ರಲ್ಲಿ ಬಿಜೆಪಿ ಹೈಕಮಾಂಡ್ ಸತ್ಯಪಾಲ್ ಮಲಿಕ್ ಅವರನ್ನು ಬಿಹಾರ ರಾಜ್ಯಪಾಲರನ್ನಾಗಿ ನೇಮಿಸಿತು. ನಂತರ ಅವರನ್ನು ವಿವಿಧ ಕಾರಣಗಳಿಗಾಗಿ ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಗೋವಾ, ಮೇಘಾಲಯ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿತ್ತು.
2022 ಅಕ್ಟೋಬರ್‌ನಲ್ಲಿ ಮೇಘಾಲಯ ರಾಜ್ಯಪಾಲರಾಗಿ ನಿರ್ಗಮಿಸಿದ ನಂತರ ಸತ್ಯಪಾಲ್ ಮಲಿಕ್ ಬಿಜೆಪಿ ಜೊತೆ ಮುನಿಸಿಕೊಂಡಿದ್ದರು. ಪುಲ್ವಾಮಾ ದಾಳಿ ಹಾಗೂ ಇನ್ನೀತರ ಕಾರಣಗಳನ್ನಿಟ್ಟುಕೊಂಡು ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ವಿರುದ್ಧ ಇತ್ತೀಚಿನ ವರ್ಷಗಳಲ್ಲಿ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು.
ಸತ್ಯಪಾಲ್ ಮಲಿಕ್ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ₹2,200 ಕೋಟಿ ಮೊತ್ತದ ಕಿರು ಜಲವಿದ್ಯುತ್ ಯೋಜನೆಯ ಕಾಮಗಾರಿಗೆ ಸಂಬಂಧಿಸಿದಂತೆ ಎರಡು ಫೈಲ್‌ಗಳಿಗೆ ಸಹಿ ಮಾಡಲು ಅವರು ₹300 ಕೋಟಿ ಲಂಚ ಪಡೆದಿದ್ದರು ಎಂಬ ಆರೋಪವನ್ನು ಹೊರಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಪಾಲ್ ಮಲಿಕ್ ಹಾಗೂ ಇತರ ಐವರ ವಿರುದ್ಧ ಕಳೆದ ಮೇ 22 ರಂದು ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.