ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲೂ ಪಿಎಸ್ಐ ನೇಮಕಾತಿ ಅಕ್ರಮ: ಸಿಬಿಐ ತನಿಖೆಗೆ ಆದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜುಲೈ 2022, 10:44 IST
Last Updated 8 ಜುಲೈ 2022, 10:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಲೆಫ್ಟಿನೆಂಟ್‌ ಗವರ್ನರ್‌ ನೇತೃತ್ವದ ಸರ್ಕಾರದ ವತಿಯಿಂದ ನಡೆದ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆ ನೇಮಕಾತಿಗೆ ತಡೆ ನೀಡಲಾಗಿದೆ ಹಾಗೂ ಸಿಬಿಐ ತನಿಖೆಗೆ ಆದೇಶಿಸಲಾಗಿದೆ.

ಲೆ. ಗವರ್ನರ್‌ ಕಚೇರಿಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಕುರಿತು ಸಿಬಿಐ ತನಿಖೆಗೆ ಆದೇಶಿಸಿರುವ ಬಗ್ಗೆ ಪ್ರಕಟಿಸಲಾಗಿದೆ. ಹಗರಣದಲ್ಲಿ ಭಾಗಿಯಾದವರನ್ನು ಶೀಘ್ರದಲ್ಲೇ ಕಾನೂನಿನ ಮುಂದೆ ನಿಲ್ಲಿಸಲಾಗುವುದು. ಭವಿಷ್ಯದ ಹಿತದೃಷ್ಟಿಯಲ್ಲಿ ಇದೊಂದು ಪ್ರಮುಖ ಕ್ರಮವಾಗಿದೆ. ನೂತನ ನೇಮಕಾತಿ ಬಗ್ಗೆ ಸರ್ಕಾರವು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

ಹಿಂದೆ ಪೊಲೀಸ್‌ ಇಲಾಖೆಯೇ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ಸೇವಾ ನೇಮಕಾತಿ ಇಲಾಖೆ (ಜೆಕೆಎಸ್‌ಎಸ್‌ಬಿ) ಯ ವತಿಯಿಂದ ಲೆ. ಗವರ್ನರ್‌ ಮನೋಜ್‌ ಸಿನ್ಹಾ ನೇತೃತ್ವದ ರಾಜ್ಯ ಸರ್ಕಾರವು ಪರೀಕ್ಷೆಯನ್ನು ನಡೆಸಲು ನಿರ್ಧರಿಸಿತ್ತು. ನೇಮಕಾತಿಯಲ್ಲಿ ಪಾರದರ್ಶಕತೆಗೆ ಒತ್ತುಕೊಟ್ಟು ಸರ್ಕಾರವೇ ಪರೀಕ್ಷೆಯನ್ನು ನಡೆಸುತ್ತಿರುವುದಾಗಿ ಹೇಳಿತ್ತು.

ಮಾರ್ಜ್‌ 27ರಂದು 1200 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆದಿತ್ತು. 1 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಸುಮಾರು 97 ಸಾವಿರ ಅರ್ಹ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ADVERTISEMENT

ಜೂನ್‌ 4ಕ್ಕೆ ಫಲಿತಾಂಶ ಪ್ರಕಟಗೊಂಡಿತ್ತು. ಬಳಿಕ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾಕಷ್ಟು ಮಂದಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಎರಡು ಡಜನ್ನಿಗೂ ಹೆಚ್ಚು ಪ್ರಕರಣಗಳಲ್ಲಿ ಒಡಹುಟ್ಟಿದವರೇ ಆಯ್ಕೆಗೊಂಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಕೆಲವು ಪ್ರಕರಣಗಳಲ್ಲಿ ಒಡಹುಟ್ಟಿದ ಮೂವರು ಉತ್ತೀರ್ಣರಾಗಿರುವುದು ಕಂಡುಬಂದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಪಡಿಸಿದ ಬಳಿಕ ಇದೇ ಮೊದಲ ಬಾರಿಗೆ ನಡೆಸಿದ ಅತಿದೊಡ್ಡ ನೇಮಕಾತಿ ಪರೀಕ್ಷೆ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.