ಹೆದ್ದಾರಿ ಬಂದ್ ಆಗಿರುವುದು
ಪಿಟಿಐ ಚಿತ್ರ
ಶ್ರೀನಗರ (ಜಮ್ಮು): ‘ನನ್ನ ಜೀವನದಲ್ಲಿ ಈ ರೀತಿಯ ಹವಾಮಾನದ ಪರಿಸ್ಥಿತಿಯನ್ನು ಎಂದಿಗೂ ಕಂಡಿರಲಿಲ್ಲ. ಮೇಘಸ್ಫೋಟದ ಸದ್ದಿನಿಂದ ಭಯಗೊಂಡಿದ್ದೆವು. ಮಳೆಯಿಂದಾಗಿ ಮನೆಯ ಗೋಡೆ ಕುಸಿದಿತ್ತು. ಅಡಿಯಲ್ಲಿ ಸಿಲುಕಿದ್ದ ಇಬ್ಬರು ಸಹೋದರರನ್ನು ರಕ್ಷಿಸಲು ಪ್ರಯತ್ನಿಸಿದೆವು, ಆದರೆ ಸಾಧ್ಯವಾಗಲಿಲ್ಲ, ಅವರು ಮೃತಪಟ್ಟಿದ್ದಾರೆ’ ಎಂದು ರಾಮಬನ ಸ್ಥಳೀಯರಾದ ಮೊಹಮ್ಮದ್ ಹಫೀಜ್ ಪಿಟಿಐ ಜತೆ ಅಳಲು ತೋಡಿಕೊಂಡರು.
ದಿಢೀರ್ ಪ್ರವಾಹದಿಂದಾಗಿ ಜಮ್ಮು ಮತ್ತು ಕಾಶ್ಮೀರದ ರಾಮಬನ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. 40 ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿದ್ದು ನೂರಾರು ಜನ ನಿರಾಶ್ರಿತರಾಗಿದ್ದಾರೆ.
ಪ್ರತಿಕೂಲ ಹವಾಮಾನದ ಕಾರಣದಿಂದ ಒಂದು ದಿನದ ಮಟ್ಟಿಗೆ ಶಾಲೆಯನ್ನು ಬಂದ್ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸಕಿನಾ ಇಟ್ಟೊ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಕಳೆದ 48 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಮುಂದಿನ 24 ಗಂಟೆಯೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಳೆಯಿಂದಾಗಿ ಹಲವು ಹಳ್ಳಿಗಳಿಗೆ ಜಿಲ್ಲಾ ಕೇಂದ್ರದಿಂದ ಸಂಪರ್ಕ ಕಡಿತಗೊಂಡಿದೆ. ಜಮ್ಮು– ಕಾಶ್ಮೀರ– ಶ್ರೀನಗರ ನಡುವಿನ 250 ಕಿ.ಮೀ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
ನಿರಾಶ್ರಿತರಿಗೆ ಸರ್ಕಾರಿ ಶಾಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಡಳಿತ ಆಹಾರ ಸೇರಿ ಇತರ ಅಗತ್ಯಗಳನ್ನು ಪೂರೈಸಿದೆ. ಭಾರತೀಯ ಸೇನೆ, ಎಸ್‌ಡಿಆರ್‌ಎಫ್, ಸ್ವಯಂ ಸೇವಕರು ಜನರ ನೆರವಿಗೆ ಧಾವಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.