ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಜಮ್ಮು–ಕಾಶ್ಮೀರ ಸಹಜಸ್ಥಿತಿಗೆ ಮರಳಿರುವುದು.
–ಪಿಟಿಐ ಚಿತ್ರ
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಭಾನುವಾರ ರಾತ್ರಿ ಬಹುತೇಕ ಶಾಂತಿ ನೆಲೆಸಿತ್ತು. ಇತ್ತೀಚಿನ ದಿನಗಳಲ್ಲಿ ಮೊದಲ ಶಾಂತಿಯುತ ರಾತ್ರಿ ಇದಾಗಿದೆ ಎಂದು ಭಾರತೀಯ ಸೇನೆ ಸೋಮವಾರ ತಿಳಿಸಿದೆ.
ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಮೇ 7ರಂದು 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಆರಂಭಿಸಿತ್ತು. ಇದರಿಂದ ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಿತ್ತು. ಪಾಕಿಸ್ತಾನ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ದಾಳಿ ನಡೆಸುತ್ತಿತ್ತು. ಉಭಯ ರಾಷ್ಟ್ರಗಳು ಮೇ 10ರಂದು(ಶನಿವಾರ) ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದವು. ಆದಾಗ್ಯೂ ಶನಿವಾರ ರಾತ್ರಿ ಕಾಶ್ಮೀರದಲ್ಲಿ ಸ್ಫೋಟದ ಶಬ್ದ ಕೇಳಿಬಂದಿತ್ತು. ಕದನ ವಿರಾಮ ಉಲ್ಲಂಘನೆಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಭಾರತ ಎಚ್ಚರಿಕೆ ನೀಡಿತ್ತು. ಭಾನುವಾರ ಗುಂಡಿನ ದಾಳಿಯಾಗಲಿ, ಶೆಲ್ ದಾಳಿಯಾಗಲಿ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಸೇನೆ ತಿಳಿಸಿದೆ.
ಹಲವು ದಿನಗಳ ಬಳಿಕ ಪೂಂಚ್ ಮತ್ತು ರಜೌರಿ ಸೇರಿದಂತೆ ಜಮ್ಮು ಪ್ರದೇಶದ ಸ್ಥಳೀಯರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದ ಮುಕ್ತವಾದ ಶಾಂತಿಯುತ ರಾತ್ರಿಯನ್ನು ಆನಂದಿಸಿದರು. ಅಲ್ಲದೇ ಸೋಮವಾರ ನಿವಾಸಿಗಳು ತಮ್ಮ ಸಾಮಾನ್ಯ ದಿನಚರಿಗೆ ಮರಳಿದ್ದಾರೆ ಎಂದೂ ಸೇನೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.