
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸದಸ್ಯ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಮೂರು ಸ್ಥಾನಗಳು ‘ಇಂಡಿಯಾ’ ಮೈತ್ರಿಕೂಟದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಪಾಲಾಗಿದ್ದರೆ, ಒಂದು ಸ್ಥಾನ ಬಿಜೆಪಿಗೆ ಧಕ್ಕಿದೆ.
ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ರಾಜ್ಯಸಭಾ ಸ್ಥಾನಗಳಿಗೆ ಇಲ್ಲಿ ನಡೆದ ಮೊದಲ ಚುನಾವಣೆ ಇದಾಗಿದೆ. ಬೆಳಿಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ 4ರವರೆಗೂ ನಡೆಯಿತು. ಸಂಜೆ 5 ಗಂಟೆಗೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಯಿತು.
ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಭ್ಯರ್ಥಿಗಳಾದ ಚೌದ್ರಿ ಮೊಹಮ್ಮದ್ ರಂಜಾನ್, ಸಜಾದ್ ಕಿಚ್ಲೂ, ಜಿ.ಎಸ್.ಒಬೆರಾಯ್ (ಪಕ್ಷದ ಖಜಾಂಚಿ) ಚುನಾಯಿತರಾದರು. ಬಿಜೆಪಿಯ ಸತ್ ಶರ್ಮಾ ಅವರು 32 ಮತಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಎನ್‌ಸಿಯ ಮತ್ತೊಬ್ಬ ಅಭ್ಯರ್ಥಿ ಇಮ್ರಾನ್ ನಬಿದಾರ್ ಅವರು 22 ಮತಗಳನ್ನಷ್ಟೇ ಪಡೆದರು.
ರಂಜಾನ್ ಮತ್ತು ಕಿಚ್ಲೂ ಅವರ ಗೆಲುವು ನಿರೀಕ್ಷಿತವಾಗಿತ್ತು. ಏಕೆಂದರೆ, ಎನ್‌ಸಿ ಬಳಿ 41 ಸದಸ್ಯರಿದ್ದರೆ, ಕಾಂಗ್ರೆಸ್‌ನ ಆರು, ಪಿಡಿಪಿಯ ಮೂವರು, ಸಿಪಿಐ(ಎಂ)ನ ಒಬ್ಬರು ಮತ್ತು ಕೆಲ ಸ್ವತಂತ್ರ ಸದಸ್ಯರು ಸೇರಿ 58 ಶಾಸಕರ ಬೆಂಬಲವಿತ್ತು.
ಒಟ್ಟು 88 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 28 ಶಾಸಕರನ್ನು ಹೊಂದಿದ್ದರೂ, 32 ಮತಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನವನ್ನು ಗೆದ್ದಿತು. ಇದು ಅಡ್ಡಮತದಾನದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹೃದಯ ಸ್ತಂಭನದಿಂದ ಪತ್ನಿ ಮೃತಪಟ್ಟ ವಿಷಯ ತಿಳಿದರೂ, ಬಿಜೆಪಿ ಶಾಸಕ ಚಂದ್ರಪ್ರಕಾಶ್ ಗಂಗಾ ಅವರು ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದರು.
ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿಕ್ಕಾಗಿ ಶಾಸಕ ಹಾಗೂ ಮಾಜಿ ಸಚಿವರು ಆದ ಚಂದ್ರ ಅವರು ಜಮ್ಮು– ಕಾಶ್ಮೀರ ವಿಧಾನಸಭಾ ಸಚಿವಾಲಯಕ್ಕೆ ಶುಕ್ರವಾರ ಬಂದಿದ್ದರು. ಇದೇ ವೇಳೆ ಅವರ ಪತ್ನಿ ಸುಷ್ಮಾ ಶರ್ಮ ಅವರು ಹೃದಯ ಸ್ತಂಭನದಿಂದ ಹಠಾತ್ ನಿಧನರಾದ ಸುದ್ದಿ ಬಂದರೂ, ಮತದಾನ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕವೇ ವಿಜಯಪುರಕ್ಕೆ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.