ADVERTISEMENT

Bihar Elections: ಮಾಜಿ ಸಂಸದನಿಗೆ ನೀಡಿದ್ದ ಟಿಕೆಟ್‌ ಹಿಂಪಡೆದ ಜೆಡಿಯು

ಪಿಟಿಐ
Published 19 ಅಕ್ಟೋಬರ್ 2025, 15:33 IST
Last Updated 19 ಅಕ್ಟೋಬರ್ 2025, 15:33 IST
ಜೆಡಿಯು
ಜೆಡಿಯು   

ಪಟ್ನಾ: ಬಿಹಾರದ ಅಮೌರ್‌ ವಿಧಾನಸಭಾ ಕ್ಷೇತ್ರ‌ದ ಜೆಡಿಯು ಅಭ್ಯರ್ಥಿಯಾಗಿ ಘೋಷಿಸಲಾಗಿದ್ದ ಮಾಜಿ ಸಂಸದ ಸಬಿರ್‌ ಅಲಿ ಅವರಿಗೆ ಟಿಕೆಟ್‌ ಅನ್ನು ನಿರಾಕರಿಸಲಾಗಿದೆ. ಈಗಾಗಲೇ ಆ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸಾಬಾ ಜಾಫರ್‌ ನಾಮಪತ್ರ ಸಲ್ಲಿಸಿದ್ದಾರೆ. 

2014ರಲ್ಲಿ ಪಕ್ಷದಿಂದ ಉಚ್ಚಾಟನೆಯಾಗಿದ್ದ ಅಲಿ ಅವರನ್ನು ಅಮೌರ್‌ ಕ್ಷೇತ್ರದ ಅಭ್ಯರ್ಥಿಯಾಗಿ ಶನಿವಾರ ಜೆಡಿಯು ಘೋಷಿಸಿತ್ತು. ಪಕ್ಷದ ಈ ಹಠಾತ್‌ ನಿರ್ಧಾರವು ಕಾರ್ಯಕರ್ತರು ಮತ್ತು ನಾಯಕರನ್ನು ಅಚ್ಚರಿಗೊಳಿಸಿತ್ತು. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಮತ್ತು 2010ರಲ್ಲಿ ಬಿಜೆಪಿಯಿಂದ ಆರಿಸಿ ಬಂದಿದ್ದ ಜಾಫರ್‌ ಅವರ ಹೆಸರು ಕಳೆದ ವಾರ ಜೆಡಿಯು ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿತ್ತು. 

ADVERTISEMENT

‘ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಅಲಿ ಅವರು ಪಕ್ಷಕ್ಕೆ ಮರಳಿರುವುದರಿಂದ ಸೀಮಾಂಚಲ ಪ್ರದೇಶದಲ್ಲಿ ಪಕ್ಷದ ಬಲ ಮತ್ತಷ್ಟು ಹಿಗ್ಗಿದಂತಾಗಿದೆ. ನಾನು ಶನಿವಾರವೇ ನಾಮಪತ್ರ ಸಲ್ಲಿಸಿದ್ದೇನೆ. ಅದನ್ನು ಹಿಂಪಡೆಯುವಂತೆ ಯಾರೂ ಕೇಳಿಲ್ಲ’ ಎಂದು ಜಾಫರ್‌ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಲಿ, ‘ಪಕ್ಷವೇ ನನ್ನನ್ನು ಅಭ್ಯರ್ಥಿ ಎಂದು ಘೋಷಿಸಿದ್ದು ಸತ್ಯ. ಅದು ಪಕ್ಷದ ಅಧಿಕೃತ ವೇದಿಕೆಗಳಲ್ಲಿ ಬಿತ್ತರವಾಗಿದೆ. ಈ ಬೆಳವಣಿಗೆಗಳನ್ನು ನಾನೇನು ಗಂಭೀರವಾಗಿ ತೆಗೆದುಕೊಂಡಿಲ್ಲ. ಪಕ್ಷವು, ಸಿಯಾಚಿನ್‌ ಹಿಮನದಿ ಸೇರಿದಂತೆ ಎಲ್ಲಿಗೇ ಕರೆದರೂ ಬಂದು ಪ್ರಚಾರ ಮಾಡುತ್ತೇನೆ’ ಎಂದು ವ್ಯಂಗ್ಯವಾಡಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.