ADVERTISEMENT

ಜೆಇಇ–ನೀಟ್‌: ನಿಲ್ಲದ ಹಗ್ಗಜಗ್ಗಾಟ

ಪರೀಕ್ಷೆ ನಡೆಸಲು ಶಿಕ್ಷಣ ತಜ್ಞರ ಆಗ್ರಹ l ಮುಂದೂಡಿಕೆಗೆ ರಾಜಕೀಯ ಪಕ್ಷಗಳ ಒತ್ತಡ

ಏಜೆನ್ಸೀಸ್
Published 27 ಆಗಸ್ಟ್ 2020, 19:40 IST
Last Updated 27 ಆಗಸ್ಟ್ 2020, 19:40 IST
ಜೆಇಇ–ನೀಟ್ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಲಖನೌನಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಸಮಾಜವಾದಿ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಿದರು –ಪಿಟಿಐ ಚಿತ್ರ
ಜೆಇಇ–ನೀಟ್ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಲಖನೌನಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಸಮಾಜವಾದಿ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಿದರು –ಪಿಟಿಐ ಚಿತ್ರ   

ಜೆಇಇ–ನೀಟ್ ಪರೀಕ್ಷೆಗಳನ್ನು ಮುಂದೂಡುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ. ಪರೀಕ್ಷೆಗಳನ್ನು ಮುಂದೂಡುವಂತೆ ವಿದ್ಯಾರ್ಥಿಗಳು ‘ಪ್ರೊಟೆಸ್ಟ್ ಫ್ರಂ ಹೋಂ’ ಮುಂದುವರಿಸಿದ್ದಾರೆ, ಸಾಮೂಹಿಕವಾಗಿ ಟ್ವೀಟ್ ಮಾಡುತ್ತಿದ್ದಾರೆ. ಪರೀಕ್ಷೆಗಳನ್ನು ಮುಂದೂಡಬೇಡಿ ಎಂದು ಐಐಟಿ ಮುಖ್ಯಸ್ಥರು, ಶಿಕ್ಷಣ ತಜ್ಞರು ಹೇಳಿದ್ದಾರೆ.

ಶಿಕ್ಷಣ ತಜ್ಞರ ಪತ್ರ

‘ವಿದ್ಯಾರ್ಥಿಗಳು ಮತ್ತು ಯುವಜನರು ದೇಶದ ಭವಿಷ್ಯ, ಕೋವಿಡ್‌ ಹಾವಳಿಯು ಇವರ ಶಿಕ್ಷಣ ಮತ್ತು ಭವಿಷ್ಯದ ಮೇಲೆ ಕರಿ ನೆರಳು ಬೀರಿದೆ. ತರಗತಿಗಳ ಆರಂಭ, ಪ್ರವೇಶದ ಬಗ್ಗೆ ಅನಿಶ್ಚಿತತೆ ಮನೆಮಾಡಿದೆ. ಶೀಘ್ರವೇ ಇವನ್ನು ಪರಿಹರಿಸಬೇಕು.ಪ್ರತಿವರ್ಷದಂತೆ ಈ ವರ್ಷವೂ ಲಕ್ಷಾಂತರ ವಿದ್ಯಾರ್ಥಿಗಳು 12ನೇ ತರಗತಿ ತೇರ್ಗಡೆಯಾಗಿ ಶಿಕ್ಷಣ ಮುಂದುವರಿಸಲು ಕಾಯುತ್ತಿದ್ದಾರೆ. ಈಗ ಪ್ರವೇಶ ಪರೀಕ್ಷೆಗಳನ್ನು ಮುಂದೂಡಿದರೆ, ಅವರ ಒಂದು ವರ್ಷ ವ್ಯರ್ಥವಾಗುತ್ತದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು, ಸರ್ಕಾರದ ನಿರ್ಧಾರವನ್ನು ವಿರೋಧಿಸುವುದು ಸರಿಯಲ್ಲ. ಪರೀಕ್ಷೆಗಳನ್ನು ಸೆಪ್ಟೆಂಬರ್‌ನಲ್ಲೇ ನಡೆಸಬೇಕು’ ಎಂದು ದೇಶದ ಹಲವು ವಿಶ್ವವಿದ್ಯಾಲಯಗಳ ಮುಖ್ಯಸ್ಥರು, ಕುಲಪತಿಗಳು ಮತ್ತು ವಿದೇಶಿ ಶಿಕ್ಷಣ ತಜ್ಞರು ಪ್ರಧಾನಿಗೆ ಪತ್ರ ಬರೆದಿದ್ದಾರೆ.

ADVERTISEMENT

ಪತ್ರಕ್ಕೆ ಸಹಿ ಹಾಕಿದವರಲ್ಲಿ ದೆಹಲಿ ವಿಶ್ವವಿದ್ಯಾಲಯ, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ, ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಸೇರಿದ್ದಾರೆ.

ಲಂಡನ್‌ ವಿ.ವಿ., ಕ್ಯಾಲಿಫೋರ್ನಿಯಾ ವಿ.ವಿ.ಯಂತಹ ವಿದೇಶಿ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಿಸುತ್ತಿರುವ ಭಾರತೀಯ ಪ್ರಾಧ್ಯಾಪಕರೂ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.

ಶೂನ್ಯ ಶೈಕ್ಷಣಿಕ ವರ್ಷದ ಅಪಾಯ

‘ಜೆಇಇ–ನೀಟ್ ಪರೀಕ್ಷೆಗಳನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಶೈಕ್ಷಣಿಕ ವರ್ಷದ ಹಲವು ಅಮೂಲ್ಯ ದಿನಗಳು ವ್ಯರ್ಥವಾಗಿವೆ. ಇನ್ನೊಮ್ಮೆ ಪರೀಕ್ಷೆ ಮುಂದೂಡಿದರೆ ಇಡೀ ಶೈಕ್ಷಣಿಕ ವರ್ಷವೇ ವ್ಯರ್ಥವಾಗುತ್ತದೆ. ಇದು ಶೂನ್ಯ ಶೈಕ್ಷಣಿಕ ವರ್ಷಕ್ಕೆ ಕಾರಣವಾಗುತ್ತದೆ. ಆಗ ಮುಂದಿನ ವರ್ಷ ಎರಡೆರಡು ಬ್ಯಾಚ್‌ಗಳ ವಿದ್ಯಾರ್ಥಿಗಳಿಗೆ ಒಟ್ಟಿಗೇ ಶಿಕ್ಷಣ ನೀಡಬೇಕಾಗುತ್ತದೆ. ನಮ್ಮ ಶೈಕ್ಷಣಿಕ ಸಂಸ್ಥೆಗಳ ಸಾಮರ್ಥ್ಯ ಅಷ್ಟಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹೀಗಾಗುವುದು ಒಳ್ಳೆಯದಲ್ಲ’ ಎಂದು ದೇಶದ ಎಲ್ಲಾ ಐಐಟಿಗಳ
ಮುಖ್ಯಸ್ಥರು ಹೇಳಿದ್ದಾರೆ.

‘ಕೋವಿಡ್‌ ಶೀಘ್ರವೇ ನಿಯಂತ್ರಣಕ್ಕೆ ಬರುವ ಸ್ಥಿತಿ ಇಲ್ಲ. ಹೀಗೆಂದು ಪರೀಕ್ಷೆಗಳನ್ನು, ಶೈಕ್ಷಣಿಕ ಚಟುವಟಿಕೆಗಳನ್ನು ಮುಂದೂಡುತ್ತಲೇ ಇರುವುದು ಸಾಧ್ಯವಿಲ್ಲ. ಪರೀಕ್ಷೆಯನ್ನು ಸೆಪ್ಟೆಂಬರ್‌ನಲ್ಲೇ ನಡೆಸಬೇಕು ಎಂಬ ನಿರ್ಧಾರ ದಿಢೀರ್ ತೆಗೆದುಕೊಂಡದ್ದಲ್ಲ. ವಿದ್ಯಾರ್ಥಿಗಳಿಗೆ ಸೋಂಕು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಲು ಸಾಧ್ಯವಿದೆ ಎಂದು ಮನವರಿಕೆಯಾದ ನಂತರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಲ್ಲಾ ಐಐಟಿಗಳು ಸರ್ಕಾರಕ್ಕೆ ನೆರವಾಗಿವೆ.

‘ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಸಿದರೂ, ನವೆಂಬರ್‌ನಲ್ಲಿ ತರಗತಿ ಆರಂಭಿಸಲು ಸಾಧ್ಯವಿಲ್ಲ. ಪರೀಕ್ಷೆ ಮತ್ತಷ್ಟು ವಿಳಂಬವಾದರೆ ಇಡೀ ವರ್ಷವೇ ಹಾಳಾಗುತ್ತದೆ. ಐಐಟಿಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಬೇರೆ ಪರ್ಯಾಯ ವಿಧಾನಗಳನ್ನು ಅನುಸರಿಸುವುದು ಸರಿಯಲ್ಲ. ಇದರಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಲೋಪವಾಗುತ್ತದೆ. ಐಐಟಿಯಿಂದ ಹೊರಬರುವ ಪದವೀಧರರ ಗುಣಮಟ್ಟ ಕುಸಿಯುತ್ತದೆ. ಹೀಗಾಗಿ ಪರ್ಯಾಯ ವಿಧಾನದ ಬಗ್ಗೆ ಯೋಚನೆ ಮಾಡಬಾರದು.

‘ವಿದ್ಯಾರ್ಥಿಗಳು ಪರೀಕ್ಷೆಗೆ ಈಗಾಗಲೇ ಸಿದ್ಧವಾಗಿದ್ದಾರೆ. ಅದೇ ಉತ್ಸಾಹದಲ್ಲಿ ಪರೀಕ್ಷೆಯನ್ನು ಎದುರಿಸಲಿ. ಅವರ ಸಾಮರ್ಥ್ಯವನ್ನು ಸಾಬೀತುಮಾಡಲಿ’ ಎಂದು ಐಐಟಿ ಮುಖ್ಯಸ್ಥರು ಕರೆ ನೀಡಿದ್ದಾರೆ.

ಪರೀಕ್ಷೆ ಮುಂದೂಡಿ: ಒಡಿಶಾ

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ, ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಮುಂದೂಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರಿಗೆ ಪತ್ರ ಬರೆದಿದ್ದರು. ಒಡಿಶಾದಲ್ಲಿ ಕೋವಿಡ್‌ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ರಾಜ್ಯದ ಹಲವೆಡೆ ಪ್ರವಾಹದ ಸ್ಥಿತಿ ಇದೆ.

ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸಿದರೆ, ವಿದ್ಯಾರ್ಥಿಗಳು ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಲವು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದೇ ಕಷ್ಟವಾಗುತ್ತದೆ. ಹೀಗಾಗಿ ಪರೀಕ್ಷೆಯನ್ನು ಮುಂದೂಡಿ ಎಂದು ಮುಖ್ಯಮಂತ್ರಿ ಅವರು, ಪ್ರಧಾನಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಅಖಿಲೇಶ್ ಪತ್ರ

‘ಜನರು ಕೆಲಸ ಮಾಡಲು ಮನೆಯಿಂದ ಹೊರಗೆ ಬರುತ್ತಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೊರಗೆ ಬರಲು ಏನು ಕಷ್ಟ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದರಲ್ಲಿ ತರ್ಕವೇ ಇಲ್ಲ. ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತಿದ್ದಾರೆ. ಆದರೆ, ಈಗ ಪರೀಕ್ಷೆಯ ಕಾರಣದಿಂದ ಹೊರಗೆ ಬರಬೇಕಾಗಿದೆ. ಕೋವಿಡ್‌ ಮತ್ತು ಪ್ರವಾಹದ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸಬಾರದು. ಮುಂದೂಡಬೇಕು’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೇಂದ್ರ ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.