ಝಾಲಾವಾಢ: ದಿನಗಳ ಹಿಂದೆಯಷ್ಟೆ, ರಾಜಸ್ಥಾನದ ಝಾಲಾವಾಢದ ಸಾಧಾರಣ ಮನೆಯೊಂದರ ಅಂಗಳದಲ್ಲಿ ಇಬ್ಬರು ಮಕ್ಕಳ ಕಿಲಕಿಲ ನಗು ಪ್ರತಿಧ್ವನಿಸುತ್ತಿತ್ತು. ಆದರೆ, ಇಂದು ಆ ನಗು ಇಲ್ಲದೆ ಮನೆಯಲ್ಲಿ ನೀರವ ಮೌನ ಆವರಿಸಿದೆ. ಯಾಕೆಂದರೆ ಶುಕ್ರವಾರ ಜಿಲ್ಲೆಯಲ್ಲಿ ಸಂಭವಿಸಿದ ಶಾಲಾ ಕಟ್ಟಡ ಕುಸಿತದಿಂದ ಮೃತಪಟ್ಟ ಏಳು ಮಕ್ಕಳಲ್ಲಿ ಈ ಇಬ್ಬರು ಮಕ್ಕಳೂ ಸೇರಿದ್ದಾರೆ.
ಶುಕ್ರವಾರ ಬೆಳಿಗ್ಗೆ, ಪಿಪಲೋದಿ ಸರ್ಕಾರಿ ಶಾಲೆಯ ಮಕ್ಕಳು ಬೆಳಗಿನ ಪ್ರಾರ್ಥನೆಗಾಗಿ ಸೇರಿದ್ದಾಗ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದೆ. ಈ ವೇಳೆ ಏಳು ಮಂದಿ ಮೃತಪಟ್ಟಿದ್ದು, 28 ಮಕ್ಕಳು ಗಾಯಗೊಂಡಿದ್ದಾರೆ.
ಬಿಕ್ಕಳಿಸುತ್ತಾ ಮಾತನಾಡಿದ 12 ವರ್ಷದ ಬಾಲಕಿ ಮೀನಾ ಮತ್ತು 6 ವರ್ಷದ ಬಾಲಕ ಕನ್ಹಾ ಅವರ ತಾಯಿ, ‘ದೇವರು ನನ್ನನ್ನು ಕರೆದುಕೊಂಡು ಹೋಗಿ, ಮಕ್ಕಳನ್ನು ಉಳಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’ ಎಂದು ಕಣ್ಣೀರಿಟ್ಟರು. ಘಟನೆಯಲ್ಲಿ ಮೀನಾ ಮತ್ತು ಕನ್ಹಾ ಹೊರತಾಗಿ, 12 ವರ್ಷ ವಯಸ್ಸಿನ ಪಾಯಲ್, ಪ್ರಿಯಾಂಕಾ, ಕುಂದನ್ ಹಾಗೂ ಎಂಟು ವರ್ಷದ ಹರೀಶ್ ಮತ್ತು ಕಾರ್ತಿಕ್ ಕೂಡಾ ಮೃತಪಟ್ಟಿದ್ದಾರೆ
‘ನಾನು ಎಲ್ಲವನ್ನೂ ಕಳೆದುಕೊಂಡೆ... ನನ್ನ ಇಬ್ಬರು ಮಕ್ಕಳನ್ನೂ ಕಳೆದುಕೊಂಡೆ. ನನ್ನ ಮನೆ ಖಾಲಿಯಾಗಿದೆ... ಈ ಅಂಗಳದಲ್ಲಿ ಆಟವಾಡಲು ಈಗ ಯಾರೂ ಉಳಿದಿಲ್ಲ. ಮಕ್ಕಳ ಬದಲು ದೇವರು ನನ್ನನ್ನು ಕರೆಸಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಅವರು ಹೇಳಿದರು. ದುರಂತವು ಹಲವು ಕುಟುಂಬಗಳನ್ನು ಶೋಕದಲ್ಲಿ ಮುಳುಗಿಸಿದ್ದರೂ, ಮಹಿಳೆಯದ್ದು ಎದ್ದುಕಾಣುವ ಹೃದಯವಿದ್ರಾವಕ ದುಃಖವಾಗಿದೆ.
ಶನಿವಾರ ಬೆಳಿಗ್ಗೆ ಏಳು ಮಕ್ಕಳ ಅಂತ್ಯಕ್ರಿಯೆ ನಡೆಸಲಾಗಿದ್ದು, ಅದರಲ್ಲಿ ಐವರು ಮಕ್ಕಳನ್ನು ಒಂದೇ ಚಿತೆಯ ಮೇಲೆ ಒಟ್ಟಿಗೆ ಸುಡಲಾಯಿತು, ಉಳಿದ ಇಬ್ಬರನ್ನು ಪ್ರತ್ಯೇಕವಾಗಿ ಸುಡಲಾಯಿತು. ಇದಕ್ಕೂ ಮೊದಲು, ಏಳು ಮಕ್ಕಳ ಶವಗಳನ್ನು ಅವರ ಕುಟುಂಬಗಳಿಗೆ ನೀಡುತ್ತಿದ್ದಂತೆ ಇಲ್ಲಿನ ಎಸ್ಆರ್‌ಜಿ ಆಸ್ಪತ್ರೆಯ ಶವಾಗಾರದ ಹೊರಗೆ ತಾಯಂದಿರ ಆಕ್ರಂದನ ಮುಗಿಲು ಮುಟ್ಟಿತ್ತು.
ಅವರಲ್ಲಿ ಕೆಲವರು ತಮ್ಮ ಮಕ್ಕಳ ಶರೀರವನ್ನು ಬಿಗಿದಪ್ಪಿ, ಬಿಟ್ಟುಕೊಡಲು ನಿರಾಕರಿಸಿದರು, ಇನ್ನು ಕೆಲವರು ದಿಗ್ಬ್ರಮೆಗೊಂಡು ಮೌನವಾಗಿ ಕುಳಿತು, ಹಠಾತ್ ಸಂಭವಿಸಿದ ದುರಂತವನ್ನು ಅರಗಿಸಿಕೊಳ್ಳಲು ಹೆಣಗಾಡಿದರು.
ದುರಂತದಲ್ಲಿ ತಮ್ಮ ಮಗುವನ್ನು ಕಳೆದುಕೊಂಡ ಮತ್ತೊಬ್ಬ ಮಹಿಳೆ ಘಟನೆ ನಡೆಯುವಾಗ ಶಾಲೆಯಲ್ಲಿದ್ದ ಶಿಕ್ಷಕರ ಬಗ್ಗೆ ಪ್ರಶ್ನೆಯೆತ್ತಿದರು. ‘ಮಕ್ಕಳನ್ನು ಬಿಟ್ಟು ಶಿಕ್ಷಕರು ಹೊರಗೆ ಹೋಗಿದ್ದಾರೆ. ಹೊರಗೆ ಅವರು ಏನು ಮಾಡುತ್ತಿದ್ದರು’ ಎಂದು ಅವರು ಕೇಳಿದರು.
ಈ ದುರಂತವು, ರಾಜಸ್ಥಾನದ ಗ್ರಾಮೀಣ ಶಾಲಾ ಮೂಲಸೌಕರ್ಯಗಳ ಸ್ಥಿತಿ ಮತ್ತು ಕಲಿಕೆಯ ಸ್ಥಳವನ್ನು ಶೋಕದ ಸ್ಥಳವನ್ನಾಗಿ ಮಾಡಿದ ವ್ಯವಸ್ಥಿತ ನಿರ್ಲಕ್ಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಘಟನೆಯ ನಂತರ ಶಾಲೆಯ ಐವರು ಸಿಬ್ಬಂದಿ ಅಮಾನತುಗೊಂಡಿದ್ದು, ಉನ್ನತಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಶಾಲಾ ಶಿಕ್ಷಣ ಸಚಿವ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.