ADVERTISEMENT

ಶಾಲೆಗಳಲ್ಲಿ ರಾಮಾಯಣ, ಭಗವದ್ಗೀತೆ: ಸುತ್ತೋಲೆ ಹಿಂಪಡೆದ ಸರ್ಕಾರ

ಪಿಟಿಐ
Published 23 ಅಕ್ಟೋಬರ್ 2018, 17:13 IST
Last Updated 23 ಅಕ್ಟೋಬರ್ 2018, 17:13 IST

ಶ್ರೀನಗರ: ಧಾರ್ಮಿಕ ಗ್ರಂಥಗಳಾದ ಭಗವದ್ಗೀತೆ ಮತ್ತು ರಾಮಾಯಣದ ಉರ್ದು ಪ್ರತಿಗಳನ್ನು ರಾಜ್ಯದ ಎಲ್ಲಾ ಶಾಲಾ, ಕಾಲೇಜು ಮತ್ತು ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂಬ ವಿವಾದಿತ ಸುತ್ತೋಲೆಯನ್ನು ಸರ್ಕಾರ ಹಿಂತೆಗೆದುಕೊಂಡಿದೆ.

ಶಾಲಾ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಸಹಿ ಮಾಡಿರುವ ಈ ಸುತ್ತೋಲೆಯನ್ನು ಸೋಮವಾರ ರಾಜ್ಯ ಸರ್ಕಾರ ಹೊರಡಿಸಿತ್ತು.

ಸರ್ವಾನಂದ ಪ್ರೇಮಿಯವರು ಬರೆದಿರುವ ಭಗವದ್ಗೀತೆ ಮತ್ತು ಕೊಶೂರ್‌ ರಾಮಾಯಣದ ಉರ್ದು ಪ್ರತಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಖರೀದಿಸಬೇಕು. ಇವುಗಳು ಶಿಕ್ಷಣ ಸಂಸ್ಥೆಗಳು ಮತ್ತು ಗ್ರಂಥಾಲಯಗಳಲ್ಲಿ ಇವುಗಳನ್ನು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದುಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾಲೇಜು ನಿರ್ದೇಶಕರು, ಗ್ರಂಥಾಲಯಗಳ ನಿರ್ದೇಶಕರು ಮತ್ತು ಸಂಸ್ಕೃತಿ ಇಲಾಖೆಗೆ ಕಳುಹಿಸಿದ್ದ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ADVERTISEMENT

ಜಮ್ಮು ಕಾಶ್ಮೀರ ರಾಜ್ಯಪಾಲ ಬಿ.ಬಿ. ವ್ಯಾಸ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್‌ 4ರಂದು ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಈ ಆದೇಶಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು.

‘ಕೇವಲ ಗೀತೆ ಹಾಗೂ ರಾಮಾಯಣ ಏಕೆ? ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಗ್ರಂಥಾಲಯಗಳಲ್ಲಿ ಧಾರ್ಮಿಕ ಗ್ರಂಥಗಳನ್ನು ಇಡುವುದಾದರೆ, ಅದರಲ್ಲಿ ನಿರ್ದಿಷ್ಟ ಧರ್ಮದ ಗ್ರಂಥಗಳನ್ನು ಮಾತ್ರ ಏಕೆ ಪರಿಗಣಿಸಲಾಗಿದೆ? ಇತರ ಧರ್ಮಗಳನ್ನು ಏಕೆ ನಿರ್ಲಕ್ಷಿಸಲಾಗಿದೆ?’ ಎಂದು ಜಮ್ಮು, ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.