ADVERTISEMENT

J-K rains: ಅನಂತನಾಗ್ ಜಿಲ್ಲೆಯಲ್ಲಿ ಅಲೆಮಾರಿ ಸಮುದಾಯದ 25 ಕುಟುಂಬಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 9:38 IST
Last Updated 3 ಸೆಪ್ಟೆಂಬರ್ 2025, 9:38 IST
   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ. ಎಲ್ಲೆಡೆ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದು, ಅನಂತ್‌ನಾಗ್ ಜಿಲ್ಲೆಯಲ್ಲಿ ಸೇತುವೆ ಕೆಳಗೆ ಸಿಲುಕಿದ್ದ ಅಲೆಮಾರಿ ಸಮುದಾಯದ 25 ಕುಟುಂಬಗಳನ್ನು ರಕ್ಷಿಸಲಾಗಿದೆ.

ದಕ್ಷಿಣ ಕಾಶ್ಮಿರದಲ್ಲಿ ಕಳೆದ 24 ಗಂಟೆಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ‌ಪುಲ್ವಾಮಾ, ಶೋಪಿಯನ್ ಮತ್ತು ಕುಲ್ಗಾಮ್ ಜಿಲ್ಲೆ ಸೇರಿದಂತೆ ಬಹುತೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

.

ADVERTISEMENT

‘ಆಂಗ್ ಅಂಜ್ವಾಲಾದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅನಂತ್‌ನಾಗ್ ಪೊಲೀಸರು ಅಲೆಮಾರಿ ಸಮುದಾಯದ 25 ಕುಟುಂಬಗಳನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದ್ದಾರೆ. ಲಿಡ್ಡರ್ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಸೇತುವೆ ಕೆಳಗೆ ವಾಸಿಸುತ್ತಿದ್ದ ಈ ಕುಟುಂಬಗಳು ಅಪಾಯಕ್ಕೆ ಸಿಲುಕಿದ್ದವು’ಎಂದು ಅನಂತನಾಗ್ ಜಿಲ್ಲಾ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಸ್ಥಳಾಂತರಗೊಂಡ ಕುಟುಂಬಗಳಿಗೆ ತುರ್ತು ನೆರವು ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ನೆರೆಯ ಕುಲ್ಗಾಮ್ ಜಿಲ್ಲೆಯ ಬ್ರಜ್ಲೂ ಹಳ್ಳಿಯಲ್ಲೂ 5 ಅಲೆಮಾರಿ ಕುಟುಂಬಗಳನ್ನು ರಕ್ಷಿಸಲಾಗಿದೆ. ವೈಷ್ಣೊವ್ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ವಿವಿಧ ಪೊಲೀಸ್ ಠಾಣೆಗಳಲ್ಲಿ ತುರ್ತು ಸಹಾಯವಾಣಿ ಆರಂಭಿಸಲಾಗಿದೆ. ನೀರಿನ ಪ್ರದೇಶಗಳಿಗೆ ತೆರಳದಂತೆ ಸಾರ್ವಜನಿಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.