ADVERTISEMENT

ಆರೋಪ ಮಾಡಿದ್ದ ಪ್ರೊಫೆಸರ್‌ ಸ್ಪಷ್ಟನೆ ಕೇಳಿದ ಜೆಎನ್‌ಯು‌‌

ಇನ್ಫೊಸಿಸ್‌ ಪ್ರಶಸ್ತಿ ಸ್ವೀಕರಿಸಲು ಕುಲಪತಿ ರಜೆ ನಿರಾಕರಣೆ ಪ್ರಕರಣ

ಪಿಟಿಐ
Published 8 ಜನವರಿ 2019, 11:48 IST
Last Updated 8 ಜನವರಿ 2019, 11:48 IST
   

ನವದೆಹಲಿ: ಇನ್ಫೊಸಿಸ್‌ ಪ್ರತಿಷ್ಠಾನದ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ತೆರಳಲು ತನಗೆ ರಜೆ ನೀಡದೆ ಕುಲಪತಿ ನಿರಾಕರಿಸಿದ್ದಾರೆಂದು ಆರೋಪ ಮಾಡಿದ್ದ ಪ್ರೊಫೆಸರ್‌ ಕವಿತಾ ಸಿಂಗ್‌ ಅವರಿಂದ ಸ್ಪಷ್ಟೀಕರಣ ಕೇಳಲಾಗಿದೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಡಳಿತ ಸೋಮವಾರ ಹೇಳಿದೆ.

‘ಕೆಲವು ರೀತಿಯ ರಜೆಗಳು ನಮ್ಮ ಹಕ್ಕುಗಳಲ್ಲ. ತಡರಾತ್ರಿ ಅಥವಾ ಕಚೇರಿ ಸಮಯ ಮುಗಿದ ಮೇಲೆ ಸಂಜೆ 5.30ರ ನಂತರ ಪ್ರೊಫೆಸರ್‌ಗಳು ರಜೆಗಾಗಿ ಅರ್ಜಿ ಸಲ್ಲಿಸಿದ ಅನೇಕ ಪ್ರಕರಣಗಳಿವೆ. ಕವಿತಾ ಅವರು ಸೋಮವಾರ ಕ್ಯಾಷುಯಲ್‌ ಲೀವ್‌ (ಸಾಂದರ್ಭಿಕ ರಜೆ)/ ವೆಕೆಷನ್‌ ಲೀವ್‌ಗೆ (ದೀರ್ಘಾವಧಿ ರಜೆ) ಅರ್ಜಿ ಸಲ್ಲಿಸಿದ್ದಾರೆ. ಯಾವ ರೀತಿಯ ರಜೆ ಎಂಬುದನ್ನು ಸ್ಪಷ್ಟಪಡಿಸುವಂತೆ ಅವರಿಗೆ ಪತ್ರ ಬರೆದಿದ್ದೇವೆ’ ಎಂದು ವಿಶ್ವವಿದ್ಯಾಲಯದ ಪ್ರೊಫೆಸರ್‌ ಚಿಂತಾಮಣಿ ಮಹಾಪಾತ್ರ ತಿಳಿಸಿದ್ದಾರೆ.

‘ವಿಶ್ವವಿದ್ಯಾಲಯದ ಸಿಬ್ಬಂದಿಗೆ ಸಂಯೋಜಿತ ರಜೆಗಳನ್ನು ಪಡೆಯುವ ಅವಕಾಶವಿದೆ. ಅದರಂತೆ ನಾನು ಸಹ ಸಂಯೋಜಿತ ರಜೆಗೆ ಅರ್ಜಿ ಹಾಕಿದ್ದೆ’ ಎಂದು ಕವಿತಾ ಸಿಂಗ್‌ ಹೇಳಿದ್ದಾರೆ.

ADVERTISEMENT

‘ನಾವು ಇ–ಕಚೇರಿ ವ್ಯವಸ್ಥೆ ಹೊಂದಿದ್ದೇವೆ. ಎಲ್ಲಿಂದಲೇ ಬೇಕಾದರೂ ರಜೆಗೆ ಅರ್ಜಿ ಸಲ್ಲಿಸಬಹುದು. ಜ.2ರಂದು ಮಧ್ಯಾಹ್ನದ ಊಟದ ವೇಳೆಯಲ್ಲಿ ರಜೆಗೆ ಅರ್ಜಿ ಸಲ್ಲಿಸಿದ್ದೆ. ಮರು ದಿನ ನಾನು ಬೆಂಗಳೂರಿನಲ್ಲಿರುವಾಗ, ‘ನಿಮ್ಮ ರಜೆ ಅರ್ಜಿ ತಿರಸ್ಕರಿಸಲಾಗಿದೆ’ ಎನ್ನುವ ಸಂದೇಶದ ಇ ಮೇಲ್‌ ನನಗೆ ಬಂದಿತು’ ಎಂದು ಅವರು ಹೇಳಿದ್ದಾರೆ.

‘ಸಾಂದರ್ಭಿಕ ರಜೆಯು ಉದ್ಯೋಗಿಯ ಹಕ್ಕು. ಈ ಹಿಂದೆ ನಾನು ಸಲ್ಲಿಸಿದ್ದ ಕರ್ತವ್ಯದ ಮೇಲಿನ ರಜೆಯ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಹಾಗಾಗಿ ಕರ್ತವ್ಯದ ಮೇಲಿನ ರಜೆ ಅರ್ಜಿ ಸಲ್ಲಿಸಿರಲಿಲ್ಲ. ಅಷ್ಟಕ್ಕೂ ನಾನು ಇದನ್ನು ವಿವಾದಾಸ್ಪದಗೊಳಿಸಲು ಬಯಸದೆ, ಸಂಯೋಜಿತ ರಜೆಗೆ ಅರ್ಜಿ ಸಲ್ಲಿಸಿದ್ದೆ. ಸೋಮವಾರ ನಾನು ಕಚೇರಿಗೆ ಮರಳಿದಾಗ, ಇ- ಕಚೇರಿ ಸಿಸ್ಟಮ್ ಪರಿಶೀಲಿಸಿದೆ. ಕುಲಪತಿಯು ರಜೆ ರದ್ದುಗೊಳಿಸಿ, 'ರಜೆ ಮಂಜೂರಾತಿಯು ಹಾಜರಾತಿಗೆ ಒಳಪಟ್ಟಿದೆ’ ಎಂದು ನಮೂದಿಸಿರುವುದನ್ನು ಗಮನಿಸಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.