ADVERTISEMENT

ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಕಡಿಮೆಯಾಗದು: ಜೋಶಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 20:24 IST
Last Updated 16 ಜೂನ್ 2019, 20:24 IST
ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ   

ನವದೆಹಲಿ: ‘ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಸಾಕಷ್ಟು ಕಲ್ಲಿದ್ದಲು ಪೂರೈಕೆ ಮಾಡುವ ಬೇಡಿಕೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುವುದು’ ಎಂದು ಕೇಂದ್ರದ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದ್ದಾರೆ.

ದೆಹಲಿಯಲ್ಲಿ ಜೋಶಿ ಅವರನ್ನು ಶನಿವಾರ ಭೇಟಿ ಮಾಡಿ ಕುಮಾರಸ್ವಾಮಿ ಅವರು ಈ ಬಗ್ಗೆ ಮನವಿ ಸಲ್ಲಿಸಿದ್ದರು.

‘ರಾಜ್ಯದ ವಿದ್ಯುತ್‌ ಸ್ಥಾವರಗಳು ಕಲ್ಲಿದ್ದಲಿನ ಕೊರತೆ ಎದುರಿಸುತ್ತಿವೆ ಎಂಬುದನ್ನು ಅರಿತಿದ್ದೇನೆ. ಪ್ರಕರಣವು ನ್ಯಾಯಾಲಯದಲ್ಲಿದ್ದರೂ, ರಾಜ್ಯದ ಸ್ಥಾವರಗಳಿಗೆ ಕಲ್ಲಿದ್ದಲಿನ ಕೊರತೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಜೋಶಿ ಭರವಸೆ ನೀಡಿದರು.

ADVERTISEMENT

ರಾಯಚೂರು, ಬಳ್ಳಾರಿ ಹಾಗೂ ಯರಮರಸ್‌ ಉಷ್ಣವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಅತ್ಯಂತ ಕಡಿಮೆಯಾಗಿದೆ. ಈ ಮೂರು ಸ್ಥಾವರಗಳಿಗೆ 2018–19ನೇ ಸಾಲಿನಲ್ಲಿ ಕೇವಲ 39.89 ಲಕ್ಷ ಟನ್‌ ಕಲ್ಲಿದ್ದಲು ಸರಬರಾಜಾಗಿದೆ ಎಂದು ಕುಮಾರಸ್ವಾಮಿ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ರಾಜ್ಯವು ತೀವ್ರವಾದ ಬರಗಾಲ ಎದುರಿಸುತ್ತಿದೆ. ಬೇಸಿಗೆಯಲ್ಲಿ ವಿದ್ಯುತ್‌ ಬೇಡಿಕೆಯೂ ಹೆಚ್ಚಾಗಿದೆ. ಆದ್ದರಿಂದ ರಾಜ್ಯಕ್ಕೆ ಸಾಕಷ್ಟು ಕಲ್ಲಿದ್ದಲು ಪೂರೈಕೆ ಮಾಡಲು ಕೇಂದ್ರ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.