ADVERTISEMENT

ಜೋಶಿಮಠ ಭೂಕುಸಿತ: ಕಟ್ಟಡ ನೆಲಸಮಕ್ಕೆ ಸ್ಥಳೀಯರ ವಿರೋಧ

ಏಜೆನ್ಸೀಸ್
Published 10 ಜನವರಿ 2023, 10:27 IST
Last Updated 10 ಜನವರಿ 2023, 10:27 IST
   

ಡೆಹ್ರಾಡೂನ್‌: ಭೂಕುಸಿತದಿಂದ ತತ್ತರಿಸಿರುವ ಉತ್ತರಾಖಂಡದ ಜೋಶಿಮಠದಲ್ಲಿನ 678 ಕಟ್ಟಡಗಳು ಅಸುರಕ್ಷಿತ ಎಂದು ಜಿಲ್ಲಾಡಳಿತ ಹೇಳಿದೆ.

ಈಗಾಗಲೇ ಎಲ್ಲಾ ನಿವಾಸಿಗಳನ್ನು 'ಅಸುರಕ್ಷಿತ' ವಲಯಗಳಿಂದ ಸ್ಥಳಾಂತರಿಸಲಾಗಿದೆ. ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ತಜ್ಞರು ಕಟ್ಟಡ ನೆಲಸಮ ‌ಕಾಮಗಾರಿ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಮಲಾರಿ ಇನ್ ಮತ್ತು ಮೌಂಟ್ ವ್ಯೂ ಹೋಟೆಲ್‌ನಲ್ಲಿ ಅಪಾಯಕಾರಿ ಬಿರುಕು ಕಂಡುಬಂದಿದೆ. ಜತೆಗೆ ನೂರಾರು ಮನೆಗಳನ್ನು ನೆಲಸಮಗೊಳಿಸುವುದಕ್ಕೆ ಜಿಲ್ಲಾಡಳಿತ ಮುಂದಾಗಿರುವುದು ಸ್ಥಳೀಯರ ಪ್ರತಿಭಟನೆಗೆ ಕಾರಣವಾಯಿತು.

ADVERTISEMENT

ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ನಿರ್ಮಾಣ ಕಾಮಗಾರಿಯೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್‌ಟಿಪಿಸಿ) ವಿರುದ್ಧ ಸ್ಥಳೀಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಆದರೆ ಎನ್‌ಟಿ‍ಪಿಸಿ ಈ ಆರೋಪವನ್ನು ತಳ್ಳಿ ಹಾಕಿದೆ. ನಮ್ಮ ಸುರಂಗ ಮಾರ್ಗ ಜೋಶಿಮಠವನ್ನು ಹಾದು ಹೋಗಿಲ್ಲ ಎಂದು ಸ್ಪಷ್ಟ‍ಪಡಿಸಿದೆ.

600ಕ್ಕೂ ಹೆಚ್ಚು ಮನೆಗಳು ವ್ಯಾಪಕ ಬಿರುಕು ಬಿಟ್ಟಿರುವುದು ಉಪಗ್ರಹ ಸರ್ವೇಕ್ಷಣೆಯಲ್ಲಿ ಕಂಡುಬಂದಿದೆ. ಸುಮಾರು 4 ಸಾವಿರ ಸಂತ್ರಸ್ತರನ್ನು ಸುರಕ್ಷಿತ ನೆಲೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.