ADVERTISEMENT

ಬಿಜೆಪಿಗೆ ಬುದ್ಧಿ ಕಲಿಸಲು ಹೆಲ್ಮೆಟ್ ಧರಿಸಿ ಕೆಲಸ ಮಾಡ್ತಿದ್ದಾರೆ ಪತ್ರಕರ್ತರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 2:20 IST
Last Updated 7 ಫೆಬ್ರುವರಿ 2019, 2:20 IST
   

ನವದೆಹಲಿ: ಪರ್ತಕತ್ರನ ಮೇಲೆ ಹಲ್ಲೆ ಮಾಡಿದ ಬಿಜೆಪಿ ನಾಯಕನ ವಿರುದ್ಧ ಛತ್ತೀಸಗಡದ ರಾಜಧಾನಿ ರಾಯಪುರದಲ್ಲಿ ವಿನೂತನ ಪ್ರತಿಭಟನೆ ನಡೆಯುತ್ತಿದೆ. ‘ನಮಗೆ ರಕ್ಷಣೆ ಇಲ್ಲ, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಪತ್ರಕರ್ತರು ಸುದ್ದಿಗೋಷ್ಠಿ ಸೇರಿದಂತೆ ಬಿಜೆಪಿ ನಾಯಕರು ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ಹೆಲ್ಮೆಟ್ ಧರಿಸಿಯೇ ಹೋಗುತ್ತಿದ್ದಾರೆ.

ಸುಮನ್ ಪಾಂಡೆ

ಕಳೆದ ಬುಧವಾರದಿಂದ ನಡೆಯುತ್ತಿದ್ದ ಪತ್ರಕರ್ತರ ಹೆಲ್ಮೆಟ್ ಪ್ರತಿಭಟನೆಗೆ ಮಣಿದ ಪೊಲೀಸರುಸ್ಥಳೀಯ ಪತ್ರಕರ್ತ ಸುಮನ್ ಪಾಂಡೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೀವ್ ಅಗರ್‌ವಾಲ್ ಸೇರಿಮೂವರು ಬಿಜೆಪಿ ನಾಯಕರನ್ನು ಪೊಲೀಸರು ಶನಿವಾರ ಬಂಧಿಸಿದ್ದರು. ಅವರೆಲ್ಲರಿಗೂ ಅದೇ ದಿನ ಜಾಮೀನು ಸಿಕ್ಕಿತು.

‘ಪತ್ರಕರ್ತ ಸುಮನ್ ಪಾಂಡೆ ಅವರ ಮೇಲೆ ಬಿಜೆಪಿ ಪದಾಧಿಕಾರಿಗಳು ಹಲ್ಲೆ ನಡೆಸಿದವಿಷಯ ತಿಳಿದ ನಂತರ ನಗರದಲ್ಲಿರುವ ಸುಮಾರು 600 ವರದಿಗಾರರು ಹೆಲ್ಮೆಟ್ ಧರಿಸಿ ಪ್ರತಿಭಟಿಸಲು ನಿರ್ಧರಿಸಿದರು. ಮಂಗಳವಾರ ಬೈಕ್ ರ್‍ಯಾಲಿ ನಡೆಸುವುದರ ಜೊತೆಗೆ ಬಿಜೆಪಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಲಾಯಿತು.ಬುಧವಾರದಿಂದ ಹೆಲ್ಮೆಟ್ ಪ್ರತಿಭಟನೆ ಶುರು ಮಾಡಿದೆವು.ಬಿಜೆಪಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ, ಸಭೆ, ಸುದ್ದಿಗೋಷ್ಠಿ ಅಥವಾ ಒಂದು ಬೈಟ್ ತೆಗೆದುಕೊಳ್ಳುವ ಸಂದರ್ಭ ಬಂದರೂ ಹೆಲ್ಮೆಟ್ ಧರಿಸಿಯೇ ಹೋಗುತ್ತಿದ್ದೆವು’ ಎನ್ನುವ ರಾಯಪುರ ಪ್ರೆಸ್‌ಕ್ಲಬ್ ಅಧ್ಯಕ್ಷ ದಾಮು ಅಮೆಡಾರೆಅವರ ಹೇಳಿಕೆಯನ್ನು‘ದಿ ಪ್ರಿಂಟ್’ ಜಾಲತಾಣ ವರದಿ ಮಾಡಿದೆ.

ADVERTISEMENT

ಪತ್ರಕರ್ತರಿಗೆ ರಕ್ಷಣೆ ಕೊಡಬೇಕು ಮತ್ತು ಅಗರ್‌ವಾಲ್ ಅವರನ್ನು ಬಿಜೆಪಿಯಿಂದ ಹೊರಹಾಕಬೇಕು ಎಂಬುದು ಪತ್ರಕರ್ತರ ಒತ್ತಾಯ. ಪತ್ರಕರ್ತರ ರಕ್ಷಣೆಗಾಗಿ ವಿಶೇಷ ಕಾಯ್ದೆಯೊಂದನ್ನು ರೂಪಿಸಲು ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ನಿರ್ಧರಿಸಿದ್ದಾರೆ.

ಅಸಲಿಗೆ ಏನಾಯ್ತು?

‘ಬಿಜೆಪಿ ವಿಭಾಗೀಯ ಕಚೇರಿಯಲ್ಲಿ ಶನಿವಾರ ಪಕ್ಷದ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು. ನಾಯಕರ ಜೊತೆಗೆ ಪ್ರಶ್ನೋತ್ತರ ಮತ್ತು ಚಿತ್ರಗಳನ್ನು ತೆಗೆದುಕೊಳ್ಳುವ ಕೆಲಸ ಮುಗಿದ ನಂತರ ಪತ್ರಕರ್ತರಿಗೆ ಸ್ಥಳದಿಂದ ಹೊರಗೆ ಹೋಗುವಂತೆ ಸೂಚಿಸಲಾಗಿತ್ತು. ಆದರೆ ಸ್ಥಳೀಯ ಪತ್ರಕರ್ತ ಪಾಂಡೆ ಮಾತ್ರ ಇತರ ಪತ್ರಕರ್ತರ ಜೊತೆಗೆ ಹೊರಗೆ ಹೋಗಲಿಲ್ಲ. ಸ್ಥಳದಲ್ಲಿಯೇ ನಿಂತು ಸಭೆಯ ನಡಾವಳಿಗಳ ಬಗ್ಗೆ ಗೂಢಚಾರಿಕೆ ಮಾಡುತ್ತಿದ್ದರು. ವಿಧಾನಸಭೆ ಸೋಲಿನ ಪರಾಮರ್ಶೆಯ ಬಗ್ಗೆ ನಡೆಯುತ್ತಿದ್ದ ಆಂತರಿಕ ಚರ್ಚೆಯನ್ನೂ ವಿಡಿಯೊ ಮಾಡಿಕೊಳ್ಳುತ್ತಿದ್ದರು’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಸುಭಾಷ್ ರಾವ್ ‘ಎನ್‌ಡಿಟಿವಿ’ಗೆಪ್ರತಿಕ್ರಿಯಿಸಿದರು.

‘ನಮಗೆ ನಮ್ಮ ತಪ್ಪಿನ ಅರಿವಾಗಿಗೆ. ನಾವು ಮಾಧ್ಯಮದವರನ್ನು ಕೈಮುಗಿದುಕ್ಷಮೆ ಬೇಡಿದ್ದೇವೆ. ಇನ್ನೇನು ಮಾಡಲು ಸಾಧ್ಯ? ಎಷ್ಟೇ ಅದ್ರೂ ಮೀಡಿಯಾ ಅಂದ್ರೆ ಮೀಡಿಯಾ. ಅವರು ಎಲ್ಲವನ್ನೂ ಬಣ್ಣ ಹಚ್ಚಿ ದೊಡ್ಡದು ಮಾಡಿಬಿಡ್ತಾರೆ’ ಎಂದು ರಾವ್ ವಿಷಾದಿಸಿದರು.

Courtesy:facebook.com/suman.pandey

‘ಬಿಜೆಪಿ ಸಭೆಯ ಚರ್ಚೆಯನ್ನುಸುಮನ್‌ ಪಾಂಡೆ ಮೊಬೈಲ್‌ನಲ್ಲಿ ಚಿತ್ರಿಸಲು ಯತ್ನಿಸುತ್ತಿದ್ದರು. ಇದಕ್ಕೆ ಅಡ್ಡಿಪಡಿಸಿದ ಅವರು (ಬಿಜೆಪಿ ನಾಯಕರು) ಪಾಂಡೆಯ ಗುರುತುಚೀಟಿ ಕೇಳಿದರು. ಪಾಂಡೆ ಅದನ್ನು ತೋರಿಸಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪಾಂಡೆಯಿಂದ ಮೊಬೈಲ್ ಕಿತ್ತುಕೊಂಡ ರಾಜಕಾರಿಣಿಗಳುವಿಡಿಯೊ ಡಿಲೀಟ್ ಮಾಡಿದರು. ಈ ಸಂದರ್ಭ ಪಾಂಡೆಯ ಮೇಲೆ ಹಲ್ಲೆ ನಡೆಯಿತು’ ಎಂದು ಪಿಟಿಐ ಸುದ್ದಿಸಂಸ್ಥೆಯ ಹಿರಿಯ ವರದಿಗಾರ ಸಂಜೀವ್‌ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.

‘ನನ್ನನ್ನು ಸಭೆಯ ಕೊಠಡಿಯಲ್ಲಿ 20 ನಿಮಿಷ ಕೂಡಿಹಾಕಲಾಗಿತ್ತು’ ಎಂದು ಪಾಂಡೆ ನಂತರ ಮಾಧ್ಯಮದ ಎದುರು ಆರೋಪ ಮಾಡಿದ್ದರು. ತನ್ನ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಗುರುತಿಸಿಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ಆದರೆ ಅವರೆಲ್ಲರೂ ಅದೇ ದಿನ ಜಾಮೀನು ಪಡೆದುಕೊಂಡರು.

ಬಿಜೆಪಿ ಕಚೇರಿಯ ಎದುರು ಪತ್ರಕರ್ತರು ಶನಿವಾರ ರಾತ್ರಿಯಿಡಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದಬಿಜೆಪಿ ಛತ್ತೀಸಗಡ ಘಟಕದ ಪ್ರಮುಖರು ಮಾತುಕತೆಗೆ ಮುಂದಾದರು. ‘ಬಿಜೆಪಿ ನಾಯಕರು ತಮ್ಮಿಂದ ಯಾವುದೆ ತಪ್ಪು ನಡೆದಿಲ್ಲ ಎನ್ನುತ್ತಿದ್ದಾರೆ. ಘಟನೆಯ ವಿಡಿಯೊ ತೋರಿಸಿದರೂ ನಂಬುತ್ತಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ನಾವು ಹಿಂದೆ ಸರಿಯುವುದಿಲ್ಲ’ ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷ ಅಮೆಡಾರೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.