ADVERTISEMENT

ಕೃಷಿ ಬಜೆಟ್ ಹೆಚ್ಚಿಸುವಲ್ಲಿ ಹಿಂದಿನ ಸರ್ಕಾರಗಳ ಮೀರಿಸಿದ ಮೋದಿ ಸರ್ಕಾರ: ನಡ್ಡಾ

ಪಿಟಿಐ
Published 20 ಆಗಸ್ಟ್ 2022, 13:39 IST
Last Updated 20 ಆಗಸ್ಟ್ 2022, 13:39 IST
ಜೆ.ಪಿ. ನಡ್ಡಾ – ಪಿಟಿಐ ಚಿತ್ರ
ಜೆ.ಪಿ. ನಡ್ಡಾ – ಪಿಟಿಐ ಚಿತ್ರ   

ಶಿಮ್ಲಾ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕೃಷಿ ಬಜೆಟ್ ಹೆಚ್ಚಿಸುವಲ್ಲಿ ಹಿಂದಿನ ಸರ್ಕಾರಗಳನ್ನು ಮೀರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ಮೋದಿ ಸರ್ಕಾರ ಕೃಷಿಕರಿಗಾಗಿ ಅನೇಕ ಕೆಲಸಗಳನ್ನು ಮಾಡಿದೆ ಎಂದು ಅವರು ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಸಿರ್‌ಮೌರ್ ಜಿಲ್ಲೆಯ ಪಾಂವ್‌ಟಾ ಸಾಹೀಬ್‌ನ ಮುನ್ಸಿಪಲ್ ಕೌನ್ಸಿಲ್ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ADVERTISEMENT

ಪ್ರತಿಪಕ್ಷಗಳು ರೈತರ ಪ್ರತಿಭಟನೆಯ ಬಗ್ಗೆ ಮಾತನಾಡುತ್ತಾ ಕುಳಿತವು. ಆದರೆ, ಮೋದಿ ಸರ್ಕಾರ ರೈತರ ಏಳಿಗೆ ಬಗ್ಗೆ ಮಾತ್ರ ಗಮನವಹಿಸಿತು ಎಂದು ಅವರು ತಿಳಿಸಿದ್ದಾರೆ.

‘ಮೋದಿ ಅಧಿಕಾರಾವಧಿಯಲ್ಲಿ ಕೃಷಿ ಬಜೆಟ್ ಗಾತ್ರ ನಾಲ್ಕು ಪಟ್ಟು ಹೆಚ್ಚಾಗಿದೆ. 2014ರಲ್ಲಿ ಕೃಷಿ ಬಜೆಟ್ ಗಾತ್ರ ₹ 33,000 ಕೋಟಿ ಇತ್ತು. ಈಗ ₹ 1,33,000 ಕೋಟಿ ಆಗಿದೆ’ ಎಂದು ಅವರು ಹೇಳಿದ್ದಾರೆ.

2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮ ಸಂಪ್ರದಾಯಗಳು ಮತ್ತು ವಿಶ್ವದ ಅತ್ಯಂತ ಹಳೆಯ ಭಾರತೀಯ ಸಂಸ್ಕೃತಿಯನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಿದೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಇದಕ್ಕೂ ಮುನ್ನ ಅವರು ಪಾಂವ್‌ಟಾ ಸಾಹೀಬ್‌ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.