ADVERTISEMENT

'ಸರ್ಕಾರ ಅಥವಾ ಸೇನೆಯನ್ನು ಟೀಕಿಸುವುದನ್ನು ದೇಶದ್ರೋಹ ಎಂದು ಪರಿಗಣಿಸಬಾರದು'

ದೀಪಕ್‌ಗುಪ್ತಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 10:01 IST
Last Updated 8 ಸೆಪ್ಟೆಂಬರ್ 2019, 10:01 IST

ಅಹಮದಾಬಾದ್‌: ‘ದೇಶದ್ರೋಹದ ಕಾನೂನನ್ನು ಸಮರ್ಪಕವಾಗಿ ಉಪಯೋಗಿಸಿದ್ದಕ್ಕಿಂತ ದುರುಪಯೋಗವಾಗಿದ್ದೇ ಹೆಚ್ಚು. ಹೀಗಾಗಿ, ಈ ಕಾನೂನಿಗೆ ತಿದ್ದುಪಡಿ ಮಾಡುವುದು ಅಗತ್ಯವಿದೆ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದೀಪಕ್‌ ಗುಪ್ತಾ ಪ್ರತಿಪಾದಿಸಿದ್ದಾರೆ.

ಇಲ್ಲಿನ ಕಾನೂನು ಸೊಸೈಟಿಯಲ್ಲಿ ನಡೆದ 15ನೇ ನ್ಯಾಯಮೂರ್ತಿ ಪಿ.ಡಿ. ದೇಸಾಯಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ದೇಶದ್ರೋಹದ ಕಾನೂನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ ವಿಷಯದ ಕುರಿತು ಅವರು ಮಾತನಾಡಿದರು.

’ತಿದ್ದುಪಡಿಯಾಗುವ ಕಾನೂನಿನಲ್ಲಿ ಯಾರೂ ಬಂಧನವಾಗದಂತೆ ಎಚ್ಚರವಹಿಸಬೇಕು. ಕೇವಲ ಚರ್ಚೆಯಿಂದ ಅಥವಾ ನಿಲುವುಗಳನ್ನು ವ್ಯಕ್ತಪಡಿಸುವುದು ದೇಶದ್ರೋಹವಾಗುವುದಿಲ್ಲ. ಯಾವುದೇ ವಿಷಯ ಹಿಂಸಾಚಾರಕ್ಕೆ ಪ್ರಚೋದನೆ ನೀಡಬಾರದು ಎನ್ನುವ ಎಚ್ಚರಿಕೆಯೂ ಅಗತ್ಯ’ ಎಂದರು.

ADVERTISEMENT

‘ಸರ್ಕಾರ ಅಥವಾ ಸೇನೆಯನ್ನು ಟೀಕಿಸುವುದನ್ನು ದೇಶದ್ರೋಹ ಎಂದು ಪರಿಗಣಿಸಬಾರದು. ಯಾವುದೇ ಪ್ರಶ್ನೆಗಳನ್ನು ಕೇಳದೆ ಮೌನವಹಿಸಿದರೆ ಹೊಸ ವ್ಯವಸ್ಥೆ ರೂಪುಗೊಳ್ಳುವುದಿಲ್ಲ. ಮನಸ್ಸು ಸಹ ಸಂಕುಚಿತಗೊಳ್ಳುತ್ತದೆ’ ಎಂದು ವಿವರಿಸಿದರು.

‘ಯಾವುದೇ ವ್ಯಕ್ತಿ ದೇಶಕ್ಕಿಂತ ದೊಡ್ಡವರಲ್ಲ. ನಮಗೆ ದೇಶವೇ ದೊಡ್ಡದು. ಸರ್ಕಾರ ಗಳು ವ್ಯಕ್ತಿಗಳಲ್ಲ. ಅದು ವ್ಯಕ್ತಿ ಕೇಂದ್ರೀತವಲ್ಲ. ಸರ್ಕಾರ ಎನ್ನುವುದು ಸಹ ಒಂದು ಸಂಸ್ಥೆ. ಹಿಂಸಾಚಾರಕ್ಕೆ ಕುಮ್ಮಕ್ಕು ನೀಡದೆ ಟೀಕಿಸಿದರೆ ಅದು ದೇಶದ್ರೋಹವಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

*ಪ್ರಸ್ತುತ ಪರಿಸ್ಥಿತಿಯಲ್ಲಿ ಮಾತುಕತೆಗಳೇ ನಡೆಯುತ್ತಿಲ್ಲ. ಚರ್ಚೆ ಎನ್ನುವುದೇ ಸತ್ತು ಹೋಗಿದೆ. ಕೇವಲ ಕೂಗುವುದಕ್ಕೆ ಮಾತ್ರ ಸೀಮಿತವಾಗಿದೆ

ದೀಪಕ್‌ ಗುಪ್ತಾಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.