ADVERTISEMENT

ದೇಶದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿ.ವೈ ಚಂದ್ರಚೂಡ್‌ ಪ್ರಮಾಣ ಸ್ವೀಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ನವೆಂಬರ್ 2022, 18:32 IST
Last Updated 9 ನವೆಂಬರ್ 2022, 18:32 IST
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪ್ರಮಾಣ ವಚನ ಬೋಧಿಸಿದರು    ಪಿಟಿಐ ಚಿತ್ರ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪ್ರಮಾಣ ವಚನ ಬೋಧಿಸಿದರು ಪಿಟಿಐ ಚಿತ್ರ   

ನವದೆಹಲಿ: ದೇಶದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನ್ಯಾ. ಧನಂಜಯ ಯಶವಂತ್‌ ಚಂದ್ರಚೂಡ್‌ (ಡಿ.ವೈ ಚಂದ್ರಚೂಡ್‌) ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಂದ್ರಚೂಡ್‌ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಅವರ ಅಧಿಕಾರಾವಧಿ 2024ರ ನವೆಂಬರ್‌ 10ರ ವರೆಗೆ ಇರಲಿದೆ.

ದೇಶದ 16ನೇ ಸಿಜೆಐ ನ್ಯಾ. ಯಶವಂತ ವಿಷ್ಣು ಚಂದ್ರಚೂಡ್‌ (ವೈ.ವಿ.ಚಂದ್ರಚೂಡ್‌) ಅವರ ಪುತ್ರ ರಾಗಿರುವ ಡಿ.ವೈ.ಚಂದ್ರಚೂಡ್‌ ಅವರು, 44 ವರ್ಷಗಳ ಬಳಿಕ ತಂದೆ ನಿರ್ವಹಿಸಿದ್ದ ಸ್ಥಾನ‌ಕ್ಕೆ ಏರಿದ್ದಾರೆ. 1978ರ ಫೆ. 22ರಂದು ಸಿಜೆಐಯಾಗಿ ಅಧಿಕಾರ ವಹಿಸಿಕೊಂಡಿದ್ದ ವೈ.ವಿ.ಚಂದ್ರಚೂಡ್‌ ಅವರು 1985ರ ಜುಲೈ 11ರಂದು ನಿವೃತ್ತರಾಗಿದ್ದರು. ಆ ಮೂಲಕ ಸುದೀರ್ಘ ಅವಧಿವರೆಗೆ ಸಿಜೆಐ ಆಗಿ ಕೆಲಸ ಮಾಡಿದ ಹಿರಿಮೆಗೆ ಭಾಜನರಾಗಿದ್ದರು.

ADVERTISEMENT

2016ರ ಮೇ 13ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಚಂದ್ರ ಚೂಡ್‌ ನೇಮಕವಾಗಿದ್ದರು. ಅದಕ್ಕೂ ಹಿಂದೆ ಅಲಹಾಬಾದ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ, ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು.

ದೆಹಲಿಯ ಸೇಂಟ್ ಸ್ಟೀಫನ್ಸ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಬಿಎ ಪದವಿ ಪಡೆದಿದ್ದ ಅವರು ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ ಲಾ ಸೆಂಟರ್‌ನಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಪೂರ್ಣಗೊಳಿಸಿದ್ದರು. ಅಮೆರಿಕದ ಹಾರ್ವರ್ಡ್‌ ಕಾನೂನು ಶಾಲೆಯಲ್ಲಿ ಎಲ್‌ಎಲ್‌ಎಂ ಪದವಿ ಹಾಗೂ ನ್ಯಾಯ ವಿಜ್ಞಾನ ವಿಷಯದಲ್ಲಿ ಡಾಕ್ಟರೇಟ್‌ ಪೂರೈಸಿದ್ದರು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (1998ರಿಂದ 2000) ಆಗಿ ಕೆಲಸ ಮಾಡಿದ್ದರು.

ಚಂದ್ರಚೂಡ್‌ ಅವರು ಅಯೋಧ್ಯೆ ತೀರ್ಪು, ಶಬರಿಮಲೆ ಪ್ರಕರಣ, ಆಧಾರ್‌ಗೆ ಮಾನ್ಯತೆ ಮುಂತಾದ ಪ್ರಮುಖ ತೀರ್ಪುಗಳನ್ನು ನೀಡಿದ್ದ ನ್ಯಾಯಪೀಠದ ಭಾಗವಾಗಿದ್ದರು.

ಗಾಂಧಿ ಪ್ರತಿಮೆಗೆ ನಮನ
ನ್ಯಾಯಪೀಠದ ಮೇಲೆ ಆಸನರಾಗುವ ಮುನ್ನ ಡಿ.ವೈ.ಚಂದ್ರಚೂಡ್‌ ಅವರು ಸುಪ್ರೀಂ ಕೋರ್ಟ್‌ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಹೂಮಾಲೆ ಹಾಕಿ ಕೈಜೋಡಿಸಿ ನಮಿಸಿದರು.

ಅವರ ಜೊತೆ ಪತ್ನಿ ಕಲ್ಪನಾ ದಾಸ್‌ ಕೂಡ ಇದ್ದರು. ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ತಮ್ಮ ಕುಟುಂಬದ ಹಿರಿಯರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಜನರ ಸೇವೆಯೇ ನನ್ನ ಆದ್ಯತೆ: ಸಿಜೆಐ
‘ನ್ಯಾಯಾಂಗದ ಸುಧಾರಣೆ, ತಂತ್ರಜ್ಞಾನ ಅಳವಡಿಕೆ ಅಥವಾ ನ್ಯಾಯಾಲಯದ ರಜಿಸ್ಟ್ರಿ ಹೀಗೆ ಎಲ್ಲಾ ವಿಷಯದಲ್ಲೂ ದೇಶದ ಸಾಮಾನ್ಯ ಜನರ ಸೇವೆ ಮಾಡು ವುದೇ ನನ್ನ ಆದ್ಯತೆ’ ಎಂದು ನೂತನ ಸಿಜೆಐ ಡಿ.ವೈ.ಚಂದ್ರಚೂಡ್‌ ಹೇಳಿದರು.

‘ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಮುನ್ನಡೆಸುವುದು ದೊಡ್ಡ ಅವಕಾಶ ಹಾಗೂ ಜವಾಬ್ದಾರಿ. ಮಾತನಾಡುವುದಷ್ಟೇ ಅಲ್ಲ ಆ ದಿಸೆಯಲ್ಲಿ ಕೆಲಸ ಮಾಡುವ ಮೂಲಕ ಜನರಲ್ಲಿ ನ್ಯಾಯಾಂಗದ ಬಗ್ಗೆ ವಿಶ್ವಾಸ ಮೂಡಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.