
ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಜೊತೆ ಸಿಜೆಐ ಭೂಷಣ್ ಆರ್. ಗವಾಯಿ
ಪಿಟಿಐ ಚಿತ್ರ
ನವದೆಹಲಿ: ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ(ಸಿಜೆಐ) ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ನೇಮಕ ಮಾಡಲಾಗಿದೆ. ನವೆಂಬರ್ 24ರಂದು ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಕೇಂದ್ರ ಕಾನೂನು ಸಚಿವಾಲಯದ ನ್ಯಾಯ ಇಲಾಖೆಯು ಅವರ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದೆ.
ಹಾಲಿ ಸಿಜೆಐ ಭೂಷಣ್ ಆರ್. ಗವಾಯಿ ಅವರ ಅಧಿಕಾರಾವಧಿ ನವೆಂಬರ್ 23ಕ್ಕೆ ಅಂತ್ಯಗೊಳ್ಳಲಿದೆ.
ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸುಮಾರು 15 ತಿಂಗಳ ಕಾಲ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ. 2027ರ ಫೆಬ್ರುವರಿ 9ರಂದು ಅವರು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.
‘ಭಾರತದ ಸಂವಿಧಾನವು ನೀಡಿರುವ ಅಧಿಕಾರವನ್ನು ಚಲಾಯಿಸಿ, ರಾಷ್ಟ್ರಪತಿಗಳು ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾದ ಸೂರ್ಯಕಾಂತ್ ಅವರನ್ನು 2025ರ ನವೆಂಬರ್ 24 ರಿಂದ ಜಾರಿಗೆ ಬರುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದಾರೆ.’ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.