
ಪಣಜಿ: ‘ಕನಿಕರ ಇಲ್ಲದ ಕಾನೂನು ದಬ್ಬಾಳಿಕೆಗೆ ಎಡೆಮಾಡಿಕೊಟ್ಟರೆ, ಕಾನೂನಿಲ್ಲದ ಕನಿಕರವು ಅರಾಜಕತೆಗೆ ದಾರಿ ಮಾಡಿಕೊಡಲಿದೆ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಭಾನುವಾರ ಇಲ್ಲಿ ಅಭಿಪ್ರಾಯಪಟ್ಟರು.
ಗೋವಾ ಕಾನೂನು ಸೇವಾ ಪ್ರಾಧಿಕಾರವು ಮಾದಕ ವಸ್ತು ದುರುಪಯೋಗದ ಬಗ್ಗೆ ಆಯೋಜಿಸಿದ್ದ 30 ದಿನಗಳ ವಿಶೇಷ ಜಾಗೃತಿ ಅಭಿಯಾನದ ಸಮಾರೋಪದಲ್ಲಿ ಮಾತನಾಡಿದ ಅವರು, ‘ಮಾದಕವಸ್ತು ದುರುಪಯೋಗವು ಕ್ರಿಮಿನಲ್ ಸಮಸ್ಯೆಯಷ್ಟೇ ಅಲ್ಲ. ಸಾಮಾಜಿಕ, ಮಾನಸಿಕ ಹಾಗೂ ವೈದ್ಯಕೀಯ ಸಮಸ್ಯೆಯೂ ಆಗಿದ್ದು, ಇದಕ್ಕೆ ಸಮಾಲೋಚನಾ ಕ್ರಮದ ಅಗತ್ಯವಿದೆ’ ಎಂದರು.
‘ನಾಲ್ಕು ದಶಕಗಳಿಂದಲೂ ನಮ್ಮ ನ್ಯಾಯದಾನದ ವ್ಯವಸ್ಥೆಯಲ್ಲಿನ ವಿಕಾಸವನ್ನು ನಾನು ಗಮನಿಸಿದ್ದು, ಸಹಾನುಭೂತಿ ಇಲ್ಲದ ಕಾನೂನು ನಿರಂಕುಶ ಆಡಳಿತಕ್ಕೆ ಅವಕಾಶ ಕಲ್ಪಿಸಿದರೆ, ಕಾನೂನಿಲ್ಲದ ಸಹಾನುಭೂತಿಯು ಗೊಂದಲಕ್ಕೆ ಆಸ್ಪದ ನೀಡಲಿದೆ’ ಎಂದು ಹೇಳಿದರು.
‘ಅಭಿಯಾನದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಮಾತನಾಡಿದಾಗ, ಜಾಗೃತಿ ಅಭಿಯಾನವು ಜನರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸದೆ ಸಂವೇದನಾಶೀಲವಾಗಿದೆ’ ಎಂಬುದು ಗೊತ್ತಾಯಿತು ಎಂದರು.
‘ಮಾದಕವಸ್ತು ಸೇವನೆಯು ವ್ಯಕ್ತಿಗಳನ್ನಷ್ಟೇ ಹಾಳು ಮಾಡಲ್ಲ. ಸಮಾಜವನ್ನೇ ನಾಶ ಮಾಡಲಿದೆ’ ಎಂದು ಹೇಳಿದರು.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಕೆ. ಮಾಹೇಶ್ವರಿ, ಮನಮೋಹನ್, ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.